ನೇಹಾ ಕೊಲೆ ಮನುಕುಲವೇ ತಲೆ ತಗ್ಗಿಸುವ ಹೇಯ ಕೃತ್ಯ : ಡಾ. ಹಂಜಿ
ಅಥಣಿ :ಏ.25: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಇಲ್ಲಿನ ಕೆಎಲ್ ಇ ಅಂಗ ಸಂಸ್ಥೆಗಳ ಆಶ್ರಯದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮಿ ಪದವಿ ಮಹಾವಿದ್ಯಾಲಯದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಾರ್ಯಾಲಯ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಎಸ್ ಎಸ್ ಎಂ ಎಸ್ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಧ್ಯಕ್ಷ ಡಾ. ಮಲ್ಲಿಕಾರ್ಜುನ ಹಂಜಿ ಮಾತನಾಡಿ ಹುಬ್ಬಳ್ಳಿಯಲ್ಲಿ ಕಾಲೇಜ್ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವುದು ಇಡೀ ಮನುಕುಲವೇ ತಲೆ ತಗ್ಗಿಸುವ ಹೇಯ ಕೃತ್ಯವಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಕಾಲೇಜು ವಿದ್ಯಾರ್ಥಿನಿ ಕೊಲೆಯಾಗುತ್ತಿರುವ ಘಟನೆ ಅನೇಕ ಪಾಲಕರಲ್ಲಿ ಆತಂಕ ಸೃಷ್ಟಿಸಿದೆ. ನೇಹಾಳನ್ನ ಕೊಚ್ಚಿ ಕೊಲೆ ಮಾಡಿದ ಹಂತಕನನ್ನು ಸುಮ್ಮನೆ ಬಿಡಬಾರದು. ಕೊಲೆಯ ಆರೋಪಿ ಫಯಾಜ್ ಎಂಬತನನ್ನು ಸಾರ್ವಜನಿಕವಾಗಿ ಕಠಿಣ ಶಿಕ್ಷೆ ವಿಧಿಸಬೇಕು. ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಈ ಘಟನೆಯ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರ್ಕಾರಕ್ಕೆ ಶೋಭೆಯಲ್ಲ. ಈ ಪ್ರಕರಣವನ್ನು ಸಿಐಡಿ ಗೆ ಒಪ್ಪಿಸುವ ಮೂಲಕ ಆರೂಪಿಗೆ ಕಠಿಣ ಶಿಕ್ಷೆ ವಿಧಿಸಬೇಕು.ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದರಿಂದ ರಾಜ್ಯ ಸರ್ಕಾರ ಕಠಿಣವಾದ ಕಾನೂನನ್ನ ರೂಪಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆ ಎಲ್ ಈ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಅಲ್ಲಪ್ಪಣ್ಣ ನಿಡೋಣಿ, ಶಂಭುಲಿಂಗ ಮಮದಾಪುರ, ಅಶೋಕ ಬುರ್ಲಿ, ವಿಜಯಕುಮಾರ ಬುರ್ಲಿ, ಪ್ರಾಚಾರ್ಯರಾದ ಡಾ. ಬಿಎಸ್ ಕಾಂಬಳೆ, ಡಾ. ರೇಷ್ಮಾ ಇನಾಮದಾರ, ಎಸ್ ಜಿ ಸಲಗರೆ, ಆರ್ ಜಿ ವoಟಗೋಡಿ, ಬಿ. ಎ. ನಾಯಿಕ, ರಾಜೇಶ ಶಿಂಧೆ, ಅಪ್ಪಯ್ಯ ಹಿರೇಮಠ, ಮಲ್ಲಿಕಾರ್ಜುನ ಕೋರಿ ಸೇರಿದಂತೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಎನ್‍ಎಸ್‍ಎಸ್, ಎನ್ ಸಿ ಸಿ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಪ್ರತಿಭಟನಾ ರ್ಯಾಯಾಲಿಯಲ್ಲಿ ಪಾಲ್ಗೊಂಡಿದ್ದರು.