ನಗು ಸರ್ವ ರೋಗಕ್ಕೆ ಮದ್ದು :ಗುಂಡಣ್ಣ ಡಿಗ್ಗಿ
ಕಲಬುರಗಿ:ಏ.25:ಈ ಜಗತ್ತಿನಲ್ಲಿ ಖುಷಿಯಿಂದ ನಕ್ಕವರಿಗಿಂತ ವಿಧಿ ಇಲ್ಲದೆ ನಕ್ಕವರೆ ಹೆಚ್ಚು ಎಂದು ಆಧ್ಯಾತ್ಮಿಕ ಚಿಂತಕ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹೇಳಿದರು.
ಆಳಂದ ತಾಲೂಕಿನ ಝಳಕಿ(ಬಿ) ಗ್ರಾಮದಲ್ಲಿ ಶ್ರೀ ಭೋಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಹಾಸ್ಯರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಗರ್ವ ಮತ್ತು ಅಹಂ ಇವೆರಡು ಸತ್ಯವನ್ನು ಸ್ವೀಕರಿಸುವುದಿಲ್ಲ ಬದಲಾಗಿ ಜೀವನ ಅವನತಿಯತ್ತ ಸಾಗಿಸುತ್ತದೆ, ನಮಗೆ ಎಷ್ಟೇ ಕಷ್ಟ ಬಂದರೂ ನ್ಯಾಯ, ನೀತಿ, ಧರ್ಮದೊಂದಿಗೆ ಜೀವನ ಸಾಗಿಸಿದವರು ಅಮರರಾಗಿ ಉಳಿಯುತ್ತಾರೆ. ಮನುಷ್ಯನು ನಗುನಗುತ ಜೀವನ ಸಾಗಿಸಿದರೆ ಯಾವುದೇ ರೋಗ ಬರುವದಿಲ್ಲ, ನಗುವೆ ಸರ್ವ ರೋಗದ ಮದ್ದು. ನಾವು ಸಮಯದ ಜೊತೆ ನಡೆಯುವ ಅವಶ್ಯಕತೆ ಇಲ್ಲ, ಸತ್ಯದ ಜೊತೆ ನಡೆದರೆ ಸಮಯವೇ ನಮ್ಮ ಜೊತೆ ಬರುತ್ತದೆ. ವಿದ್ಯಾರ್ಥಿ ಯುವಕರಿಗೆ ಹಲವಾರು ಹಾಸ್ಯ ಚಟಾಕಿಗಳೊಂದಿಗೆ ಉತ್ತಮ ಸಂದೇಶಗಳ ನೀಡುತ್ತಾ ನಾಡು, ನುಡಿ ಹಾಗೂ ರಾಷ್ಟ್ರದ ಬಗ್ಗೆ ಭಕ್ತಿ ಮೂಡಿಸುತಾ, ಬರುವ ಚುನಾವಣೆಯಲ್ಲಿ ಕಡ್ಡಾಯವಾಗಿ ಸರ್ವರು ಮತದಾನ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ಮತದಾನವೆ ಶ್ರೇಷ್ಠದಾನ ಎಂದು ಹೇಳುತ್ತಾ ಜನಜಾಗೃತಿ ಮೂಡಿಸಿದರು. ಹಲವಾರು ಹಾಸ್ಯ ಚಟಾಕಿಗಳೊಂದಿಗೆ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸಿ ನೆರೆದವರನ್ನು ರಂಜಿಸಿದರು. ರಸಮಂಜರಿ ಕಾರ್ಯಕ್ರಮದಲ್ಲಿ ಜೂನಿಯರ್ ರಾಜಕುಮಾರ (ಹೇಮಂತ ಮಾಲಗತ್ತಿ) ಡಾ. ರಾಜಕುಮಾರ ಅವರ ಉತ್ತಮ ನಟನೆಯೊಂದಿಗೆ ನಿಜವಾದ ಡಾ.ರಾಜರನ್ನು ನೆನಪಿಸಿ ನೆರೆದವರು ರಂಜಿಸಿದ್ದರು. ಮಿಮಿಕ್ರಿ ಕಲಾವಿದ ರಾಚಯ್ಯ ಸ್ವಾಮಿ ಖಾನಾಪುರ, ಜನಪದ ಕಲಾವಿದ ಮಹೇಶ ತೆಲೆಕುಣಿ ಕಾರ್ಯಕ್ರಮ ನೀಡುವುದರೊಂದಿಗೆ ಜನರನ್ನು ಮನರಂಜಿಸಿದರು ಪತ್ರಕರ್ತರಾದ ರಾಚಪ್ಪ, ಹಾಗೂ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ವೇದಿಕೆಯ ಮೇಲಿದ್ದರು. ಕಾರ್ಯಕ್ರಮದಲ್ಲಿ ಮಹಿಳೆಯರು, ಯುವಕರು, ಹಿರಿಯರು, ಮಕ್ಕಳು ಸೇರಿದಂತೆ ಗ್ರಾಮದ ಹಲವಾರು ಜನ ಭಾಗವಹಿಸಿದರು.