ಅಭಿಯಂತರರ ದಿನಾಚರಣೆ
ಧಾರವಾಡ,ಸೆ.21: ಆಧುನಿಕ ತಂತ್ರಜ್ಞಾನವು ಇಂದಿನ ದಿನಗಳಲ್ಲಿ ಅಗತ್ಯವಾಗಿದ್ದು ಇದರಿಂದಾಗಿ ಹೊಸ ಹೊಸ ಬದಲಾವಣೆಯನ್ನು ಕಾಣುತ್ತಿದ್ದೇವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಡಾ. ವಿದ್ಯಾಶಂಕರ ಎಸ್. ಅವರು ಹೇಳಿದರು.
ಅವರು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಯಲ್ಲಿ ಆಯೋಜಿಸಲಾದ ಅಭಿಯಂತರರ ದಿನಾಚರಣೆಯನ್ನು ಉದ್ಘಾಟಿಸಿ, ಮಾತನಾಡಿದರು.
ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೊಸ ಆವಿಷ್ಕಾರಗಳು ಮತ್ತು ಸಂಶೋಧನೆಗಳ ಅವಶ್ಯಕತೆ ಇದೆ. ಇಂಥಹ ವಿನ್ಯಾಸಗಳು ಹವಾಮಾನ ಚಕ್ರ ಬದಲಾವಣೆಗೆ ಅನುಗುಣವಾದ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತವೆ. ಸುಸ್ಥಿರ ಬದುಕಿಗಾಗಿ ನೈಸರ್ಗಿಕ ಸಂಪನ್ಮೂಲಗಳಾದ ಕೃಷಿ ಭೂಮಿ, ಅರಣ್ಯ, ನೆಲ, ಜಲ, ಗಾಳಿ ಸಂರಕ್ಷಣೆ ಗಮನದಲ್ಲಿರಿಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.
ವಾಲ್ಮಿ ಸಂಸ್ಥೆಯ ನಿರ್ದೇಶಕ ಡಾ. ರಾಜೇಂದ್ರ ಎನ್. ಪೋದ್ದಾರ ಅವರು ಮಾತನಾಡಿ ಇಂಜಿನಿಯರ್‍ಗಳು ವಿಷಯ ಪರಿಣಿತಿಯ ಜೊತೆಗೆ ಸಾಮಾಜಿಕ ಅಭಿಯಾಂತ್ರಿಕತೆಯನ್ನು ರೂಢಿಸಿಕೊಂಡಾಗ ಮಾತ್ರ ಸಾಮಾಜಿಕ ಅಭಿವೃದ್ಧಿ ಸಾಧ್ಯ ಎಂದರು. ಈ ವರ್ಷದ ಅಭಿಯಂತರರ ದಿನಾಚರಣೆಯ ಘೋಷವಾಕ್ಯವಾದ ಸುಸ್ಥಿರತೆಯಲ್ಲಿ ಅಭಿಯಂತರರ ಪಾತ್ರ ಕುರಿತು ಮಾತನಾಡಿ ನಾವು ನಿರ್ಮಾಣ ಮಾಡುವ ಕಟ್ಟಡ, ಸಂರಚನೆಗಳು ಮತ್ತು ಸಮಾಜ ಸುಭದ್ರವಾಗಿರಬೇಕೆಂದರು. ಜೊತೆಗೆ, ಉತ್ತಮ ಜೀವನ ಶೈಲಿಯ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಇಂಜಿನೀಯರ್ ಕನ್ನಯ್ಯ ನಾಯ್ಡು ಮಾತನಾಡಿದರು. ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರರು ವಿಮಲಾ ಕಾಳೆ, ಭಾರತೀಯ ಅಭಿಯಂತರರ ಸಂಸ್ಥೆಯ ಇಂಜಿನೀಯರ ವಿಜಯ ತೋಟಗೇರ, ಸಮಾಲೋಚಕ ಸಿವಿಲ್ ಅಭಿಯಂತರರ ಸಂಘದ ಅಧ್ಯಕ್ಷ ಸುನೀಲ ಬಾಗೇವಾಡಿ, ಸಮಾಲೋಚಕ ಸಿವಿಲ್ ಅಭಿಯಂತರರ ವೇದಿಕೆಯ ಅಧ್ಯಕ್ಷ ಸಂತೋಷ ಅಂಚಟಗೇರಿ, ಲಕ್ಷ್ಮೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರು ಡಾ. ಶಿವರಾಜಕುಮಾರ ಗೌಡರ, ಹೆಚ್. ಶಾಂತನಗೌಡ, ರೈತ ಪ್ರತಿನಿಧಿಗಳು, ತುಂಗಭದ್ರಾ ಯೋಜನೆ ಇವರನ್ನು ಸನ್ಮಾನಿಸಲಾಯಿತು.
ಪ್ರಾಧ್ಯಾಪಕ ಪ್ರೊ. ಬಿ.ವೈ. ಬಂಡಿವಡ್ಡರ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಹ ಪ್ರಾಧ್ಯಾಪಕ ಪ್ರದೀಪ ದೇವರಮನಿ ಕಾರ್ಯಕ್ರಮ ಸಂಯೋಜಿಸಿದರು. ಸಹಾಯಕ ಅಭಿಯಂತರ ಮಹದೇವಗೌಡ ಹುತ್ತನಗೌಡರ ಕಾರ್ಯಕ್ರಮ ನಿರೂಪಿಸಿದರು.
ತುಂಗಭದ್ರಾ ಯೋಜನೆ ಪ್ರದೇಶದ ರೈತರು, ಕಮಲಾ ಮತ್ತು ವೆಂಕಪ್ಪ ಎಮ್ ಅಗಡಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಲಕ್ಷ್ಮೇಶ್ವರ ವಿದ್ಯಾರ್ಥಿಗಳು, ಜಲ ಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಗಳ ಅಭಿಯಂತರರು, ವಾಲ್ಮಿ ಸಂಸ್ಥೆಯ ಬೋಧಕ ಮತ್ತು ಬೋಧಕೆರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.