ಶಕ್ತಿ ಸಾಮಥ್ರ್ಯ ಇರುವವರೆಗೆ ಸೇವೆ ಮಾಡುತ್ತೇನೆ: ಮಲ್ಲಿಕಾರ್ಜುನ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.05: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಆರ್.ಟಿ.ಓ ಅಧಿಕಾರಿ ಸಮಾಜ ಸೇವಕ ಮಲ್ಲಿಕಾರ್ಜುನ್ ಅವರಿಗೆ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಮತ್ತು ಮುಖಂಡರುಗಳಿಂದ ಅಭಿನಂದನೆ ಸಲ್ಲಿಸಲಾಯಿತು.
ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಕಛೇರಿಯಲ್ಲಿ ತೆಂಡೇಕೆರೆಯ ಬಾಳೆಹೊನ್ನೂರು ಶಾಖಾ ಮಠದ ಗಂಗಾಧರ ಶಿವಾಚಾರ್ಯ ಶ್ರೀಗಳ ಪಾದಪೂಜೆಯ ಮೂಲಕ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಮಲ್ಲಿಕಾರ್ಜುನ್ ಅವರನ್ನು ಅಭಿನಂದಿಸಿ ಮಾತನಾಡಿದ ಹಲವು ಗಣ್ಯರು ಸರ್ಕಾರಿ ಸೇವೆಯಲ್ಲಿದ್ದರೂ ತಾನು ಹುಟ್ಟಿದ ನೆಲದ ಜನರ ಕಷ್ಠ ಸುಖಗಳಿಗೆ ಮಲ್ಲಿಕಾರ್ಜುನ್ ಧ್ವನಿಯಾಗಿದ್ದಾರೆ. ಸರ್ಕಾರಿ ಸೇವೆ ಮತ್ತು ಸಾಮಾಜಿಕ ಸೇವೆಗಳನ್ನು ಸರಿದೂಗಿಸಿಕೊಂಡು ತಾಲೂಕಿನ ಬಡವರ ಕಷ್ಠ ಕಾರ್ಪಣ್ಯಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ಜನ ಜಾಗೃತಿ ಸಮಿತಿಯ ಸದಸ್ಯರಾಗಿ ಧಾರ್ಮಿಕ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ್ ದೇವಾಲಯಗಳ ಜೀರ್ಣೋದ್ದಾರ, ಕ್ರೀಡಾ ಚಟುವಟಿಕೆಗಳು, ರಂಗಭೂಮಿ ಚಟುವಟಿಕೆಗಳು, ಬಡ ಮಕ್ಕಳ ಶಿಕ್ಷಣಕ್ಕೆ ಅಗತ್ಯ ನೆರವು ಮುಂತಾದ ಹಲವಾರು ಸಹಾಯ ಮಾಡುತ್ತಾ ಕ್ಷೇತ್ರದ ಜನರ ಆಶಾ ಕಿರಣವಾಗಿದ್ದಾರೆ.
ಜಾತಿಯ ಚೌಕಟ್ಟು ಮೀರಿ ಮಲ್ಲಿಕಾರ್ಜುನ್ ಮಾಡುತ್ತಿರುವ ಸಮಾಜ ಸೇವೆಗಳು ಅವರ ಜನಪ್ರಿಯತೆಯನ್ನು ಹೆಚ್ಚಿಸಿವೆ. ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ್ ಇದೀಗ ಬೆಂಗಳೂರು ವಲಯದಿಂದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಮಲ್ಲಿಕಾರ್ಜುನ್ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಲಿ. ಅವರ ಸಮಾಜ ಸೇವೆ ನಿರಂತರವಾಗಿರಲಿ ಎಂದು ಅಶಿಸಿದರು.
ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದ ಆರ್.ಟಿ.ಓ ಮಲ್ಲಿಕಾರ್ಜುನ್ ನಾನೊಬ್ಬ ಸರ್ಕಾರಿ ಸೇವಕ. ನನ್ನ ದುಡಿಮೆಯ ಒಂದು ಭಾಗವನ್ನು ನಾನು ಹುಟ್ಟಿದ ನೆಲಕ್ಕೆ ಅರ್ಪಿಸಬೇಕೆನ್ನುವ ಕಾರಣಕ್ಕೆ ನಾನು ಹುಟ್ಟಿದ ಮಣ್ಣಿನಲ್ಲಿ ಅಲ್ಪ ಮಟ್ಟದ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿದ್ದೇನೆ. ನನಗೆ ಶಕ್ತಿ ಮತ್ತು ಸಾಮಥ್ರ್ಯ ಇರುವವರೆಗೆ ನನ್ನ ಹುಟ್ಟೂರಿನ ಸೇವೆ ನಿರಂತರವಾಗಿರುತ್ತದೆ. ನಾನು ಹುಟ್ಟಿದ ಮಣ್ಣಿನ ಶಕ್ತಿ, ಸರ್ಕಾರಿ ಸೇವೆ ಸಲ್ಲಿಸುವ ಸೌಭಾಗ್ಯ ದೊರಕಿರುವುದು ಮತ್ತು ನನ್ನ ತಂದೆ ತಾಯಿಗಳ ಶಕ್ತಿ ನನಗೆ ಪ್ರೇರಣೆಯಾಗಿದೆ. ತಾಲೂಕಿನ ಜನ ನನ್ನನ್ನು ತಮ್ಮ ಮನೆಯ ಮಗನಂತೆ ಪ್ರೀತಿಸಿ ಗೌರವಿಸುತ್ತಿರುವುದು ನನ್ನನ್ನು ಮಂತ್ರಮುಗ್ದನನ್ನಾಗಿಸಿದೆ.
ನಿಮ್ಮ ಅಭಿನಂದನೆಯಿಂದ ಬಂದ ಹಾರ ತುರಾಯಿಗಳು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿವೆ. ನಿಮ್ಮೆಲ್ಲರ ಪ್ರೀತಿಯನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗುವ ಭಾರ ನನ್ನ ಮೇಲಿದೆ ಎಂದರು.
ತೆಂಡೇಕೆರೆಯ ಬಾಳೆಹೊನ್ನೂರು ಶಾಖಾ ಮಠದ ಗಂಗಾಧರ ಶಿವಾಚಾರ್ಯ ಶ್ರೀಗಳು, ಮುಖಂಡರಾದ ಬೂಕನಕೆರೆ ವೆಂಕಟೇಶ್, ಗುಡುಗನಹಳ್ಳಿ ರಾಯಪ್ಪ, ಆಲಂಬಾಡಿ ಕಾವಲು ಜಯರಾಂ, ತಾಲೂಕು ಪರಿಶಿಷ್ಠ ಜಾತಿ ಪಂಗಡದ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯೋಗೆಶ್, ಆದಿಹಳ್ಳಿ ಮೀನಾಕ್ಷಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರುಗಳಾದ ಎಂ.ಕೆ.ಹರಿಚರಣತಿಲಕ್, ಕೆ.ಆರ್.ನೀಲಕಂಠ ಬಸವೇಗೌಡ,ಪಿಕೆಜಿ ಮಹೇಶ್, ಶಮೀರ್ ಮತ್ತಿತರರು ಅಭಿನಂದನಾ ಭಾಷಣ ಮಾಡಿದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕ ಸಂಘಟನೆಗಳ ಸದಸ್ಯರು ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು