ಪಂಚಾಯತಿ ಸಿಬ್ಬಂದಿ ಮುಷ್ಕರ: ಸೇವೆ ಬಂದ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಅ.05: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಿಬ್ಬಂಧಿಗಳು ಅನಿಧಿಷ್ಟಾವಧಿ ಮುಷ್ಕರ ಆರಂಭಿಸಿದ್ದು ತಾಲೂಕಿನ ಎಲ್ಲಾ 34 ಗ್ರಾಮ ಪಂಚಾಯತಿಗಳಲ್ಲೂ ಸಾರ್ವಜನಿಕ ಆಡಳಿತ ಸೇವೆ ಸಂಪೂರ್ಣ ಬಂದ್ ಆಗಿತ್ತು.
ತಾಲೂಕಿನ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಬೀಗ ತೆಗೆಯುವವರೂ ಇಲ್ಲದೆ ಗ್ರಾಮ ಪಂಚಾಯತಿ ಕಛೇರಿಗಳ ಬಾಗಿಲು ಬಂದ್ ಆಗಿದ್ದರೆ ಬೆರಳೆಣಿಕೆಷ್ಟು ಗ್ರಾಮ ಪಂಚಾಯತಿಗಳಲ್ಲಿ ಬಾಗಿಲು ತೆರೆದಿದ್ದರೂ ಸಿಬಂಧಿಗಳಿಲ್ಲದೆ ಬಿಕೋ ಎನ್ನುತ್ತಿದ್ದವು.
ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಕರ ವಸೂಲಿಗಾರರು, ನೀರುಗಂಟಿಗಳು ಸೇರಿದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ನೌಕರರು ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ವಿರುದ್ದ ಹೋರಾಟದ ಕಹಳೆ ಮೊಳಗಿಸಿದ್ದು ಗ್ರಾಮೀಣ ಆಡಳಿತ ಸೇವೆ ಸಂಪೂರ್ಣ ಸ್ಥಗಿತವಾಗಿತ್ತು. ಸಿಬ್ಬಂಧಿಗಳ ಮುಷ್ಕರದ ಅರಿವಿಲ್ಲದ ಸಾರ್ವಜನಿಕರು ಗ್ರಾಮ ಪಂಚಾಯತಿ ಕಾರ್ಯಲಯಕ್ಕೆ ಬಂದು ಹಿಂದುರುಗಿ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮುಷ್ಕರದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಕೆಲವು ಪಿ.ಡಿ.ಓ ಗಳು 2004 ರಿಂದ ಸೇವೆ ಸಲ್ಲಿಸುತ್ತಿರುವ ಪಿ.ಡಿ.ಓ ಗಳಿಗೆ ಜೇಷ್ಠತೆ ಆಧರಿಸಿ ನೀಡಬೇಕಾದ ಬಡ್ತಿ ಸಿಗುತ್ತಿಲ್ಲ. ನರೇಗಾ ಯೋಜನೆಗೆ ಗುರಿ ನಿಗಧಿ ಪಡಿಸಿ ಕಾರ್ಯ ಒತ್ತಡ ಹೇರಲಾಗುತ್ತಿದೆ. ಗುಮಾಸ್ತರು, ಕರ ವಸೂಲಿಗಾರರು, ನೀರುಗಂಟಿಗಳು ಮತ್ತಿತರರು ಪದೋನ್ನತಿಯಿಲ್ಲದೆ ನಿವೃತ್ತರಾಗುತ್ತಿದ್ದಾರೆ. ಕಾರ್ಯದರ್ಶಿ ಗ್ರೇಡ್ ? 1 ವೃಂದದಿಂದ ಪಿ.ಡಿ.ಓ ವೃಂದಕ್ಕೆ ಮುಂಬಡ್ತಿ ನೀಡುವುದು ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ನಾವು ಮುಷ್ಕರದ ಹಾದಿ ತುಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಸಾರ್ವಜನಿಕರ ಹಿತದೃಷ್ಠಿಯಿಂದ ತಕ್ಷಣವೇ ನಮ್ಮ ಬೆಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.
ರೈತಸಂಘ ಆಗ್ರಹ: ರಾಜ್ಯದಾದ್ಯಂತ ಈಗಾಲೇ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಗಳು ತಮ್ಮ ಬೆಡಿಕೆಗಳ ಈಡೇರಿಕೆಗಾಗಿ ಅನಿರ್ಧಿಷ್ಟ ಚಳುವಳಿಯನ್ನು ಆರಂಭಿಸಿರುವುದರಿಂದ ಕಂದಾಯ ಇಲಾಖೆಯ ಆಡಳಿತ ಸಂಪೂರ್ಣ ಬಂದ್ ಆಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ರೈತರ ಕೆಲಸಗಳು ಸ್ಥಗಿತಗೊಂಡಿವೆ. ಈಗ ಗಾಯದ ಮೇಲೆ ಬರೆ ಎಳೆದಂತೆ ಗ್ರಾಮ ಪಂಚಾಯತಿ ನೌಕರರೂ ಚಳುವಳಿಯ ಹಾದಿ ಹಿಡಿದಿರುವುದರಿಂದ ಗ್ರಾಮೀಣ ಜನರ ಸಮಸ್ಯೆಗಳನ್ನು ಕೇಳುವವರೆ ಇಲ್ಲದಂತಾಗಿದೆ. ಹತ್ತು ಹಲವು ಹಗರಣಗಳ ಸುಳಿಗೆ ಸಿಲುಕಿ ಒದ್ದಾಡುತ್ತಿರುವ ರಾಜ್ಯ ಸರ್ಕಾರ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ಸಿಬ್ಬಂಧಿಗಳ ಮುಷ್ಕರದ ಪರಿಣಾಮ ರೈತಾಪಿ ಸಮುದಾಯದ ಮೇಲೆ ಆಗುತ್ತಿದೆ. ರಾಜ್ಯ ಸರ್ಕಾರ ತಕ್ಷಣವೇ ತಮ್ಮ ಒಣ ರಾಜಕೀಯವನ್ನು ಬದಿಗೊತ್ತಿ ನೌಕರರ ಸಮಸ್ಯೆಗಳನ್ನು ಈಡೇರಿಸುವತ್ತ ಕ್ರಮ ವಹಿಸಬೇಕು. ರೈತಾಪಿ ವರ್ಗಕ್ಕೆ ಸಮಸ್ಯೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡುವಂತೆ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಆಗ್ರಹಿಸಿದ್ದಾರೆ.