ಐತಿಹಾಸಿಕ ಶ್ರೀರಂಗಪಟ್ಟಣ ದಸರಾಗೆ ಶಿವರಾಜುಕುಮಾರ್ ಚಾಲನೆ
ಸಂಜೆವಾಣಿ ವಾರ್ತೆ
ಮಂಡ್ಯ: ಅ.05:- ದಸರಾದ ಮೂಲ ನೆಲೆಯಾದ ಪಾರಂಪರಿಕ ಹಾಗೂ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ವಿಜೃಂಣೆಯಿಂದ ನಡೆದ ನಾಡಹಬ್ಬ ದಸರಾ ಉತ್ಸವವನ್ನು ಸಹಸ್ರಾರು ಜನರು ಸಾಕ್ಷೀಕರಿಸಿದರು.ಜಂಬೂ ಸವಾರಿಯು ದಸರಾದ ಗತವೈವ ಸಾರಿತು.ಮೈಸೂರಿಗೂ ಮುನ್ನ ವಿಜೃಂಣೆಯಿಂದ ನಡೆದ ಶ್ರೀರಂಗಪಟ್ಟಣ ದಸರಾ ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು.
ದಸರಾ ಮಹೋತ್ಸವಕ್ಕೆ ಪಟ್ಟಣದ ಹೊರವಲಯದ ಕಿರಂಗೂರು ಸರ್ಕಲ್‍ನಲ್ಲಿನ ದಸರಾ ಮಂಟಪದಲ್ಲಿ ಶ್ರೀಚಾಮುಂಡೇಶ್ವರಿ ಮತ್ತು ಶಮೀವೃಕ್ಷ(ಬನ್ನಿ ಮರ)ಕ್ಕೆ ಪೂಜೆ ಸಲ್ಲಿಸುವ ಮೂಲಕ ದಸರಾ ಕಾರ್ಯಕ್ರಮಗಳು ಆರಂಭಗೊಂಡವು.ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಶಮೀ ಪೂಜೆ ನೆರವೇರಿಸಿದರು.
ಇದಕ್ಕೂ ಮೊದಲು ಪ್ರಧಾನ ಬಲಿ ನೀಡಿ ಪುಣ್ಯಾಹ,ಪಂಚಗವ್ಯ, ಗಣಪತಿ ಪೂಜೆಯೊಂದಿಗೆ ಮಂಟಪ ಪೂಜೆ ನೆರವೇರಿಸಿ ಶ್ರೀಚಾಮುಂಡೇಶ್ವರಿ ಮತ್ತು ಶ್ರೀಮಹಾವಿಷ್ಣುವನ್ನು ಆವಾಹನೆ ಮಾಡಲಾಯಿತು.ನಂತರ ಬನ್ನಿ ಪೂಜೆ,ನಂದಿಕಂಬ ಪೂಜೆ ನಡೆಯಿತು.ಇಷ್ಟು ಪೂಜಾ ವಿಧಾನಗಳನ್ನು ವೇದಬ್ರಹ್ಮ ಡಾ.ಶ್ರೀಭಾನುಪ್ರಕಾಶ ಶರ್ಮಾ, ಶ್ರೀರಂಗಪಟ್ಟಣದ ಶ್ರೀಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಕೆ.ಎಸ್.ಲಕ್ಷ್ಮೀಶ ನೇತೃತ್ವದ 20 ಮಂದಿ ವೈದಿಕರ ತಂಡ ನೆರವೇರಿಸಿತು.
ಬಳಿಕ ಮಂಟಪದಲ್ಲಿ ಇಡಲಾಗಿದ್ದ ಸಿಂಹದ ಮೇಲೆ ಆಸೀನಳಾಗಿರುವ ಶ್ರೀಚಾಮುಂಡೇಶ್ವರಿಯ ಮೂರ್ತಿಯಿದ್ದ ಅಂಬಾರಿ(ಮರದ ಔದ)ಯನ್ನು `ಮಹೇಂದ್ರ’ ಆನೆಯ ಬೆನ್ನ ಮೇಲೆ ಬೃಹತ್ ಜೆಸಿಬಿ ಯಂತ್ರದ ಸಹಾಯದಿಂದ ಇಡಲಾಯಿತು.ಮಧ್ಯಾಹ್ನ 1.30ಕ್ಕೆ ಆರಂಗೊಂಡ ಅಂಬಾರಿ ಕಟ್ಟುವ ಪ್ರಕ್ರಿಯೆ ನಡೆಯಿತು.ಅಕ್ರಂ ನೇತೃತ್ವದ 10 ಜನರ ತಂಡವು ಅಂಬಾರಿ ಕಟ್ಟುವ ಕಾರ್ಯವನ್ನು ನಿರ್ವಹಿಸಿತು.
ಮಧ್ಯಾಹ್ನ 3.25ಕ್ಕೆ ಚಲನಚಿತ್ರ ನಟ ಡಾ.ಶಿವರಾಜಕುಮಾರ್ ಅವರು ದಸರಾ ಮಂಟಪದ ಪಕ್ಕದಲ್ಲಿ ನಿರ್ಮಿಸಿದ್ದ ವಿಶೇಷ ಅಟ್ಟಣಿಗೆಯಲ್ಲಿ ನಿಂತು ಸಾರೋಟು ಮಾದರಿಯ ವಾಹನದಲ್ಲಿದ್ದ ಶ್ರೀಚಾಮುಂಡೇ ಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾಗೆ ವಿದ್ಯುಕ್ತ ಚಾಲನೆ ನೀಡಿದರು.
ವೇದಬ್ರಹ್ಮ ಡಾ.ಶ್ರೀಭಾನುಪ್ರಕಾಶ ಶರ್ಮ ಅವರು ವೇದಮಂತ್ರಗಳನ್ನು ಪಠಿಸಿದರು.ಬಳಿಕ ‘ಮಹೇಂದ್ರ’ ಆನೆ ಮೇಲಿದ್ದ ಅಂಬಾರಿಯಲ್ಲಿನ ತಾಯಿ ಶ್ರೀಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದರು. ಚಾಮುಂಡೇಶ್ವರಿ ವಿಗ್ರಹದ ಅಂಬಾರಿ ಹೊತ್ತ ಮಹೇಂದ್ರ ಗಾಂಭೀರ್ಯದೊಂದಿಗೆ ಹಿರಾಣ್ಯ ಹಾಗೂ ಲಕ್ಷ್ಮಿ ಆನೆಗಳು ಬನ್ನಿಮಂಟಪ ಕಿರಂಗೂರಿನಿಂದ ಶ್ರೀರಂಗನಾಥಸ್ವಾಮಿ ದೇವಾಲಯದವರೆಗೆ ಸಾಗಿತು.
ಸೆಲ್ಫಿ ಸಂಭ್ರಮ
ಜಂಬೂಸವಾರಿ ಸಾಗುತ್ತಿದ್ದ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಹಸ್ರಾರು ಜನರು ತಮ್ಮ ಮೊಬೈಲ್‍ಗಳ ಮೂಲಕ ಮೆರವಣಿಗೆಯ ದೃಶ್ಯಗಳ ಫೆÇೀಟೋ,ವೀಡಿಯೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದರು. ಆನೆಗಳು ಹತ್ತಿರ ಬರುತ್ತಿದ್ದಂತೆ ಮುಗಿಬಿದ್ದು ಫೆÇೀಟೋ ತೆಗೆಯುತ್ತಿದ್ದರು.ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು.
ಅಂಬಾರಿ ಯಾವುದು?
ಮೈಸೂರು ದಸರಾ ಉತ್ಸವದಲ್ಲಿ ಚಿನ್ನದ ಅಂಬಾರಿಯ ಜಂಬೂ ಸವಾರಿ ನಡೆಯುತ್ತದೆ.ಆದರೆ, ಮೂಲನೆಲೆ ಶ್ರೀರಂಗಪಟ್ಟಣದಲ್ಲಿ ಕೆಲ ಕ್ಷಣಗಳು ಮಾತ್ರ ನಡೆದ ಮರದ ಅಂಬಾರಿ(ಔದಾ)ಯ ಜಂಬೂ ಸವಾರಿ ನೋಡಿ ಜನರು ಸಂಭ್ರಮಿಸಿದರು.ಶಕ್ತಿದೇವತೆ ಶ್ರೀಚಾಮುಂಡೇಶ್ವರಿ ಆಸೀನಳಾಗಿದ್ದ ಅಂಬಾರಿಯು ಆನೆಯ ಹೆಗಲನ್ನೇರುತ್ತಿದ್ದಂತೆ ಜನರು ಭಕ್ತಿಭಾವದಿಂದ ಕೈಮುಗಿದು ಧನ್ಯತಾಭಾವ ಪ್ರದರ್ಶಿಸಿದರು.
ಬನ್ನಿಮಂಟಪದಿಂದ ಶ್ರೀರಂಗನಾಥ ಸ್ವಾಮಿ ದೇವಲಯದವರೆಗೆ ನಡೆದ ಆಕರ್ಷಕ ಮೆರವಣಿಗೆಗೆ ಕಲಾತಂಡಗಳು ಹಾಗೂ ಸ್ಥಬ್ಥಚಿತ್ರಗಳು ವಿಶೇಷ ಮೆರಗು ನೀಡಿದವು.
ವಿವಿಧ ಕಲಾ ಪ್ರಕಾರಗಳಾದ ಪೂಜಾ ಕುಣಿತ, ವೀರಗಾಸೆ, ಸೋಮನ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ತಮಟೆ ನಗಾರಿ,ನಂದಿ ದ್ವಜ, ಗಾರುಡಿ ಗೊಂಬೆ, ಚಿಲಿಪಿಲಿ ಗೊಂಬೆ,ದೊಣ್ಣೆ ವರಸೆ, ಕತ್ತಿವರಸೆ, ಬೆಂಕಿ ಭರಾಟೆ ಜನಮನ ಸೂರೆಗೊಂಡವು.
ರೇಷ್ಮೆ ಇಲಾಖೆಯಿಂದ ರೇಷ್ನೆ ಹುಳು ಸಾಕಾಣಿಕೆ ಹಾಗೂ ಅದರ ಉತ್ಪನ್ನಗಳ ಸ್ಥಬ್ದ ಚಿತ್ರ,ವಿದ್ಯಾ ಭಾರತಿ ಶಾಲೆಯಿಂದ ನವ ದುರ್ಗಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗೃಹ ಲಕ್ಷ್ಮಿ ಯೋಜನೆ, ಶಾಲಾ ಶಿಕ್ಷಣ ಇಲಾಖೆಯಿಂದ ಜ್ಞಾನಪೀಠ ಪ್ರಶಸ್ತಿ ವಿಜೇತರು ಹಾಗೂ ಶಿಕ್ಷಣ ಇಲಾಖೆ ಸೌಲಭ್ಯದ ಬಗ್ಗೆ ಸ್ಥಬ್ದ ಚಿತ್ರ ಸೇರಿದಂತೆ ಕೃಷಿ, ತೋಟಗಾರಿಕೆ, ಖಾದಿ ಮತ್ತು ಗ್ರಾಮೋದ್ಯೋಗ, ಆರೋಗ್ಯ, ಅಗ್ನಿ ಶಾಮಕ ಇಲಾಖೆ ಹಾಗೂ ಭಗವಾನ್ ಬುದ್ಧ ಕುರಿತು ಸ್ಥಬ್ಧ ಚಿತ್ರಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿದವು.
ನಟ ಶಿವರಾಜ್ ಕುಮಾರ್ ಮಾತನಾಡಿ ಮೈಸೂರಿನಲ್ಲಿ ದಸರಾ ಪ್ರಾರಂಭಕ್ಕೂ ಮೊದಲು ಶ್ರೀರಂಗಪಟ್ಟಣದಲ್ಲಿ ದಸರಾ ನಡೆಯುತ್ತಿತ್ತು.ಇಂತಹ ಐತಿಹಾಸಿಕ ದಸರಾ ಉದ್ಘಾಟನೆ ಮಾಡುತ್ತಿರೋದು ನನ್ನ ಪುಣ್ಯ ಎಂದು ಹೇಳಿದರು.
ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಶ್ರೀರಂಗಪಟ್ಟಣ ದಸರಾ ಆಚರಣೆ: ಎನ್ ಚಲುವರಾಯಸ್ವಾಮಿ ಅಂಬಾರಿ ಮೆರವಣಿಗೆಗೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಮಾತನಾಡಿ ಶ್ರೀರಂಗಪಟ್ಟಣ ದಸರಾವು ಮೈಸೂರಿಗಿಂತ ಮೊದಲು ಪ್ರಾರಂಭವಾಗಿದೆ.ಕಳೆದ ವರ್ಷಕ್ಕಿಂತ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಮಾಡಲಾಗುತ್ತಿದೆ.ಆಚರಣೆ ಮಾಡಲಾಗುತ್ತಿದೆ.ಸಂಜೆ ವೇದಿಕೆ ಕಾರ್ಯಕ್ರಮಗಳಿದ್ದು,4 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ಆಯೋಜಿಸಿರುವುದರಿಂದ ಬಹಳ ಆಕರ್ಷಣೀಯವಾಗಿದೆ. ಆಹಾರ ಮಳಿಗೆ ಹಾಗೂ ಜೊತೆಗೆ ದಸರಾ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಹೇಳಿ ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಮೈಸೂರು ಹಾಗೂ ಜಿಲ್ಲೆಯಲ್ಲಿ ಮಾತ್ರ ದಸರಾ ಹಬ್ಬವನ್ನು ಕಣ್ತುಂಬಿಕೊಳ್ಳಲು ಸಾಧ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ , ಸಾರ್ವಜನಿಕರು ದಸರಾ ಹಬ್ಬ ಕಣ್ತುಂಬಿಕೊಳ್ಳಬೇಕೆಂದರೆ ಮೈಸೂರು, ಶ್ರೀರಂಗಪಟ್ಟಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವ ದಸರಾ ಹಬ್ಬವನ್ನು ನೋಡಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ನಾಡಹಬ್ಬ ದಸರಾವನ್ನು ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದರು.
ಮೈಸೂರು ದಸರಾ ಪ್ರಾರಂಭವಾಗುವ ಮುಂಚೆ ಶ್ರೀರಂಗಪಟ್ಟಣದಲ್ಲಿ ದಸರಾ ಹಬ್ಬವು ಆರಂಭವಾಗಿತ್ತು. ವಿಜಯನಗರ ಸಾಮ್ರಾಜ್ಯವು ಅಸ್ತಿತ್ವದಲ್ಲಿದ್ದಾಗ ವಿಜಯನಗರದ ದಸರಾ ಜೊತೆಗೆ ಶ್ರೀರಂಗ ಪಟ್ಟಣದಲ್ಲೂ ಕೂಡ ದಸರಾ ಹಬ್ಬವನ್ನು ಆಚರಿಸಲಾಗುತ್ತಿತ್ತು. ಶ್ರೀರಂಗಪಟ್ಟಣದಿಂದ ರಾಜ ಮನೆತನವು ಮೈಸೂರಿಗೆ ಹೋದ ನಂತರ ಶ್ರೀರಂಗಪಟ್ಟಣದಿಂದ ಮೈಸೂರಿಗೆ ದಸರಾ ಹಬ್ಬವನ್ನು ವರ್ಗಾಯಿಸಲಾಯಿತು.ನೂರಾರು ವರ್ಷಗಳ ಇತಿಹಾಸವನ್ನು ನೆನಪಿಸುವ ಶ್ರೀರಂಗಪಟ್ಟಣ ದಸರಾವನ್ನು ಮತ್ತೆ ಆಚರಿಸಲು ಶುರು ಮಾಡಲಾಯಿತು. ಶ್ರೀರಂಗಪಟ್ಟಣ ದಸರಾ ಆಚರಣೆ ಪ್ರಾರಂಭವಾದ ನಂತರ ಮತ್ತೊಮ್ಮೆ ಶ್ರೀರಂಗಪಟ್ಟಣ ದಸರಾ ವೈಭವವನ್ನ ಕಾಣಬಹುದಾಗಿದೆ. ವಿಜಯದಶಮಿಯು ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡಲಿ,ಒಳ್ಳೆಯದಕ್ಕೆ ಯಾವಾಗಲೂ ಗೆಲುವಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ಶಾಸಕ ಹಾಗೂ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ ಎ.ಬಿ ರಮೇಶ್ ಬಂಡಿಸಿದ್ದೇಗೌಡ, ಶಾಸಕರಾದ ಪಿ ರವಿಕುಮಾರ್, ದರ್ಶನ್ ಪುಟ್ಟಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು, ಹಾಗೂ ಇನ್ನಿತರರು ಉಪಸ್ಥಿತರಿದ್ದರು.