ಆದಿಶಕ್ತಿ, ಪರಾಶಕ್ತಿ ದೇವಿಮಾತೆಯ ಅನುಗ್ರಹ ಎಲ್ಲರಿಗೂ ಅತ್ಯವಶ್ಯಕ : ಲೊಖಂಡೆ
ಭಾಲ್ಕಿ:ಅ.೫: ಆದಿಶಕ್ತಿ, ಪರಾಶಕ್ತಿ, ಜಗನ್ಮಾತೆ ದೇವಿಮಾತೆಯ ಅನುಗ್ರಹ ಎಲ್ಲರಿಗೂ ಅತ್ಯವಶ್ಯಕವಾಗಿದೆ ಎಂದು ವಿಶ್ವಹಿಂದೂ ಪರಿಷತ್ ಮುಖಂಡ ಶಿವಕುಮಾರ ಲೋಖಂಡೆ ಅಭಿಪ್ರಾಯವ್ಯಕ್ತಪಡಿಸಿದರು.
ಪಟ್ಟಣದ ಭಾಲ್ಕೇಶ್ವರ ಮಂದಿರದ ಹತ್ತಿರ, ಕಾಳಿಕಾಮಾತೆಗೆ ಪೂಜೆ ಸಲ್ಲಿಸಿ, ದಾಡಗಿಬೇಸ್ ಜೈ ಭವಾನಿಮಾತಾ ದೇವಿ ಮೂರ್ತಿ ಉತ್ಸವ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಹಾಮಾತೆ ದೇವಿಯು ಪರಾಶಕ್ತಿಯಾಗಿದ್ದು, ಅವಳ ಅನುಗ್ರಹ ವಿದ್ದರೆ ನಮ್ಮೆಲ್ಲ ದುಖ: ದುಮ್ಮಾನಗಳು ದೂರವಾಗುತ್ತವೆ. ಹೀಗಾಗಿ ನವರಾತ್ರಿ ಮಹೋತ್ಸವದಲ್ಲಿ ಆದಿಶಕ್ತಿ ದೇವಿಯ ಆರಾಧನೆ ಎಲ್ಲರೂ ಮಾಡುವರು. ನವಾರಾತ್ರಿಯ ಸಮಯದಲ್ಲಿ ದೇವಿಯ ಅನುಗ್ರಹ ಹೆಚ್ಚಿನದ್ದಾಗಿರುತ್ತದೆ. ಈ ಸಮಯದಲ್ಲಿ ದೇವಿಯನ್ನು ಆರಾಧಿಸಿದರೆ ನಮ್ಮಲ್ಲ ಇಷ್ಠಾರ್ಥಗಳು ಸಿದ್ಧಿಸುವವು ಎಂದು ಹೇಳಿದರು.
ದಾಡಗಿಬೇಸ್ ಜೈ ಭವಾನಿಮಾತಾ ದೇವಿ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಮುಖಂಡ ದತ್ತು ಜಾಧವ ಮಾತನಾಡಿ, ಭಾಲ್ಕಿ ಪಟ್ಟಣದಲ್ಲಿ ದಾಡಗಿ ಬೇಸ್ ಹತ್ತಿರ ಸುಂದರವಾದ ದೇವಿ ಮೂರ್ತಿಯನ್ನು ಪ್ರತಿವರ್ಷ ಪ್ರತಿಷ್ಠಾಪಿಸಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿಯೂ ದೇವಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಒಂಬತ್ತು ದಿವಸಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ದೇವಿಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಸದಸ್ಯ ಮಹೇಶ ವಂಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಶ್ರೀಧರ ಪಾಟೀಲ, ಈಶ್ವರ ನಿಗೆವಾನ, ರಮೇಶ ಬಳತೆ, ನರಸಿಂಗ ಇಂಚೂರೆ, ನಿರಂಜನ ದೇಶಮುಖ, ಆಕಾಶ ಮಾಕ್ಷಿಲರಿ, ಪ್ರೇಮ ದೇಶಮುಖ ಉಪಸ್ಥಿತರಿದ್ದರು. ಪವನ ಸ್ವಾಮಿ ಸ್ವಾಗತಿಸಿದರು. ಸಂಜು ಎಂತ್ರಾಸೆ ನಿರೂಪಿಸಿದರು.