ಹಂಪಿ ಡೆಸ್ಟಿನೇಷನ್ ಮ್ಯಾನೇಜ್ ಮೆಂಟ್ ಸಮಿತಿ ಸಭೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.25: ವಿಶ್ವ ಪಾರಂಪರಿಕ  ತಾಣವಾದ ಹಂಪಿಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ವದೇಶಿ ದರ್ಶನ್ 2.0 ಯೋಜನೆಯಡಿ ಪ್ಯಾಕೇಜ್-2ರಲ್ಲಿ ವಿವಿಧ ಯೋಜನೆಗಳನ್ನು ಕೈಗೊಳ್ಳುವ ನಿಮಿತ್ತ ವಿಸ್ತೃತ ಪರಿಕಲ್ಪನಾ ವರದಿ ತಯಾರಿಸುವುದರ ಬಗ್ಗೆ ಚರ್ಚಿಸಲು ಮಹತ್ವದ ಹಂಪಿ ಡೆಸ್ಟಿನೇಷನ್ ಮ್ಯಾನೇಜಮೆಂಟ್ ಸಮಿತಿ ಸಭೆಯು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಡೆಸ್ಟಿನೇಷನ್ ಮ್ಯಾನೇಜಮೆಂಟ್ ಕಮೀಟಿ ಹಂಪಿಯ ಸದಸ್ಯರು ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಯೋಜನೆಗೆ ಸಂಬಂಧಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ  ಭಾಗವಹಿಸಿದ್ದರು. ಕೇಂದ್ರ ಪುರಷ್ಕೃತ ಸ್ವದೇಶ ದರ್ಶನ್ 2.0 ಯೋಜನೆಯಡಿ ಹಂಪಿಯನ್ನು ಅಭಿವೃದ್ಧಿಪಡಿಸುವ ಸಂಬಂಧ ಹಂಪಿ ಡೆಸ್ಟಿನೇಶನ್ ಮ್ಯಾನೇಜಮೆಂಟ್ ಸಮಿತಿಯನ್ನು ಸರ್ಕಾರದ ಆದೇಶದಂತೆ ಈಗಾಗಲೇ ರಚಿಸಲಾಗಿದ್ದು,  ಹಂಪಿ ಬೈನೈಟ್, ವಿಜಯವಿಠ್ಠಲ್ ದೇವಸ್ಥಾನದ ಹತ್ತಿರ ಕುಡಿಯುವ ನೀರಿನ ಮೊಬೈಲ್ ವ್ಯಾನ್ ಸೇರಿದಂತೆ ಸ್ವದೇಶಿ ದರ್ಶನ್ 2.0 ಯೋಜನೆಯಡಿ ಪ್ಯಾಕೇಜ್-2ರಲ್ಲಿ ವಿವಿಧ ಯೋಜನೆಗಳ ವಿಸ್ತೃತ ಪರಿಕಲ್ಪನಾ ವರದಿ ತಯಾರಿಸುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.