ಬಡವರಿಗೆ ಸ್ಪಂದಿಸುವುದು ಕಾಂಗ್ರೆಸ್  ಮಾತ್ರಎಪಿಎಂಸಿಯಲ್ಲಿ ತುಕರಾಂ ಮತಯಾಚನೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.25: ಲೋಕಸಭಾ ಕ್ಷೇತ್ರ ಚುನಾವಣೆಯ  ಕಾಂಗ್ರೆಸ್‌ ಅಭ್ಯರ್ಥಿ ಇ.ತುಕರಾಂ ಅವರು ಇಂದು ಬೆಳಿಗ್ಗೆ ನಗರದ ಎ.ಪಿ.ಎಂ.ಸಿ. ತರಕಾರಿ ಮಾರುಕಟ್ಟೆಯಲ್ಲಿ ಸಂಚರಿಸಿ ಅಲ್ಲಿಗೆ ಆಗಮಿಸಿದ ಜನತೆ ಮತ್ತು ವ್ಯಾಪಾರಿಗಳ ಬಳಿ ತೆರಳಿ ಮತಯಾಚನೆ ಮಾಡಿದರು.
ಬಡವರ ಸಂಕಷ್ಟಗಳಿಗೆ ಸ್ಪಂದಿಸುವ ಪಕ್ಷ ವೆಂದರೆ ಕಾಂಗ್ರೆಸ್ ಮಾತ್ರ, ಶ್ರೀಮಂತರ ಪರವಾದ ಬಿಜೆಪಿಗೆ ತಕ್ಕ ಪಾಠ  ಕಲಿಸಿ ಎಂದು ಮನವಿ ಮಾಡಿದರು.
ಈ ಬಾರಿ ಚುನಾವಣೆಯಲಿ ಮೋದಿ ಮತ್ತು  ಬಿಜೆಪಿ ಅಭ್ಯರ್ಥಿಗಳ ಸೋಲಿಗೆ  ಸ್ಪಷ್ಟ ಮುನ್ಸೂಚನೆಗಳಿವೆ. ಅವುಗಳೆಂದರೆ ಬಿಜೆಪಿ ತನ್ನ ಪ ಪ್ರಣಾಳಿಕೆಯನ್ನು ಜನರ ಮುಂದಿಡುವುದು ಬಿಟ್ಟು, ಕಾಂಗ್ರೆಸ್ ಪ್ರಣಾಳಿಕೆಯ ಮೊರೆ ಹೋಗಿರುವುದು. ಕಾಂಗ್ರೆಸ್ ಭರವಸೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು. ಕಳೆದೆರಡು ಚುನಾವಣೆಗಳಲ್ಲಿ ಅಚ್ಚೇದಿನ್, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾ ಅಭಿವೃದ್ಧಿಯ ಮಾತಾಡುತ್ತಿದ್ದ ಮೋದಿ ಈ ಬಾರಿ ಆ  ಮುಖವಾಡ ಕಳಚಿಟ್ಟು ಮುಸ್ಲಿಂ ದ್ವೇಷದ ಕೋಮುವಾದಿ ಭಾಷಣ ಕುಟ್ಟುತ್ತಿರುವುದು. ನಾ ಖಾವೂಂಗ ನಾ ಖಾನೇದೂಂಗ, ಚೌಕಿದಾರ್ ಬನೂಂಗಾ, ಭ್ರಷ್ಟಚಾರಿಯೋಂಕೋ ಮಿಟಾದೂಂಗ ಎನ್ನುತ್ತಿದ್ದ ಮೋದಿ ಈ ಸಲ ಅಪ್ಪಿತಪ್ಪಿಯೂ ಭಾಷಣದಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸದೆ ಇರುವುದು.     ಯುವಜನ ಕೇಂದ್ರಿತವಾಗಿರುತ್ತಿದ್ದ ಚುನಾವಣೆ ಈ ಸಲ ಮಹಿಳಾ ಕೇಂದ್ರಿತವಾಗಿರುವುದು. ಮಹಿಳೆಯರು ಭಾವನಾತ್ಮಕ ಸಂಗತಿಗಿಂತ ಬದುಕಿನ ವಾಸ್ತವಿಕತೆಗಳಿಗೆ ಹೆಚ್ಚು ಮೌಲ್ಯ ಕೊಡುತ್ತಾರೆ. ಅವರು ಚುನಾವಣೆ ಕೇಂದ್ರವಾದಷ್ಟೂ ಬಿಜೆಪಿಯ ಬೊಗಳೆ ಮಾತುಗಳು ಬಣ್ಣ ಕಳೆದುಕೊಳ್ಳುತ್ತವೆ. ಕರ್ನಾಟಕದಲ್ಲಿ ಕುಮಾರಸ್ವಾಮಿ ಹೆಂಗಸರು ಹಾದಿ ತಪ್ಪಿದ್ದಾರೆ ಎಂದಿದ್ದಾಗಲಿ, ರಾಜಸ್ಥಾನದಲ್ಲಿ ಮೋದಿ ಮಹಿಳೆಯರ ಮಾಂಗಲ್ಯವನ್ನು ಎಳೆದು ತಂದಿದ್ದಾಗಲಿ ಮಹಿಳಾ ಕೇಂದ್ರಿತ ಚುನಾವಣೆಗೆ ಸಾಕ್ಷಿಯಾಗಿದೆ. ಅದಕ್ಕಾಗಿ ಕಾಂಗ್ರೆಸ್ ಗೆ ಮತನೀಡಿ ಬಡವರ ಪರವಾದ ಸರ್ಕಾರ ರಚನೆಗೆ ಸಹಕಾರಿಯಾಗಿ ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜೆ.ಎಸ್.ಆಂಜನೇಯಲು,ಮಾಜಿ ವಿಧಾನ ಪರಿಷತ್‌ ಸದಸ್ಯ ಶ್ಕೆ.ಎಸ್.ಎಲ್.ಸ್ವಾಮಿ ಕಾರ್ಯಕರ್ತರು ಉಪಸ್ಥಿತರಿದ್ದರು.