ಮತಗಟ್ಟೆ ನಿಯಮ ಪಾಲಿಸಿ
ಧಾರವಾಡ,ಏ25: ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನಕ್ಕೆ ನೋಂದಾಯಿಸಿಕೊಂಡಿರುವ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಶೇ.40 ಕ್ಕಿಂತ ಹೆಚ್ಚು ಅಂಗವಿಕಲತೆ ಇರುವ ವಿಕಲಚೇತನ ಮತದಾರರು ಏಪ್ರಿಲ್ 25 ಮತ್ತು ಏಪ್ರಿಲ್ 26 ರಂದು ಮನೆಯಿಂದ ಮತದಾನ ಮಾಡಲಿದ್ದಾರೆ. ಈ ಕುರಿತು ಮಾಹಿತಿಯನ್ನು ನೋಂದಾಯಿತ ಮತದಾರರಿಗೆ ತಲುಪಿಸಲಾಗಿದ್ದು, ಸಿಬ್ಬಂದಿಗಳು ಅಗತ್ಯ ಸಿದ್ದತೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಚುನಾವಣಾ ಆಯೋಗದ ನಿಯಮಗಳನ್ನು ತಪ್ಪದೇ ಪಾಲಿಸಿಬೇಕು, ಮತದಾನದ ಗೌಪ್ಯತೆ ಕಾಪಾಡಬೇಕು ಎಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸೆಕ್ಟರ್ ಅಧಿಕಾರಿಗಳಿಗೆ, ಅಂಚೆಮತಪತ್ರದ ನೋಡಲ್ ಅಧಿಕಾರಿಗಳಿಗೆ, ಮತಗಟ್ಟೆ ಅಧಿಕಾರಿಗಳಿಗೆ, ಭದ್ರತೆಗೆ ನಿಯೋಜಿತ ಪೆÇಲೀಸ್ ಹಾಗೂ ಬಿಎಲ್‍ಓಗಳಿಗೆ ಆಯೋಜಿಸಿದ್ದ ಮನೆಯಿಂದ ಮತದಾನ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ದೇಶಿಸಿ, ಮಾತನಾಡಿದರು.
ಮತಗಟ್ಟೆಯಲ್ಲಿ ಮತದಾನ ಮಾಡುವಾಗ ಅನುಸರಿಸುವ ನಿಯಮಗಳನ್ನು ತಪ್ಪದೇ ಮನೆಯಿಂದ ಮತದಾನವಾಗುವಲ್ಲಿ ಅನುಸರಿಸಬೇಕು. ಮತದಾನ ಚಲಾವಣೆಯಲ್ಲಿ ಗೌಪ್ಯತೆ ಕಾಪಾಡಬೇಕು. ಮತದಾರ ಮತ್ತು ಅಧಿಕಾರಿಗಳಿಗೆ ಮಾತ್ರ ಮತದಾನ ಸ್ಥಳದಲ್ಲಿ ಇರಲು ಅವಕಾಶವಿದೆ. ನಿಯೋಜಿತ ಪೆÇಲೀಸರು ಅಗತ್ಯ ಭದ್ರತೆ ನೀಡಬೇಕು. ಸೆಕ್ಟರ್ ಅಧಿಕಾರಿಗಳು ರೂಟ್ ಮತ್ತು ಇತರ ಅಗತ್ಯ ಮಾಹಿತಿ ನೀಡಬೇಕೆಂದು ಅವರು ಹೇಳಿದರು.
ಜಿಲ್ಲೆಯ ನೋಂದಾಯಿತ ಎಲ್ಲ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಶೇ.40 ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿರುವ ವಿಕಲಚೇತನರಿಗೆ ಏ. 25 ಮತ್ತು 26 ರಂದು ಮನೆಯಿಂದ ಮತದಾನ ಮಾಡಲು ದಿನಾಂಕ ನಿಗದಿಪಡಿಸಲಾಗಿದ್ದು, ಅಂದು ಮತದಾರ ಮನೆಯಲ್ಲಿ ಇದ್ದು ಮತ ಚಲಾಯಿಸುವಂತೆ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಏ.25 ಮತ್ತು 26 ರಂದು ಅಧಿಕಾರಿಗಳು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾರನ ಮನೆಮನೆಗೆ ತೆರಳಿ ಮತದಾನ ಪ್ರಕ್ರಿಯೆ ಕಾರ್ಯವನ್ನು ಕೈಗೊಳ್ಳಲಿದ್ದಾರೆ.
ಅಧಿಕಾರಿಗಳು ಬ್ಯಾಲೇಟ್ ಪೇಪರದೊಂದಿಗೆ ಮತದಾರನಿಗೆ ಮುಂಚಿತವಾಗಿ ತಿಳಿಸಿರುವ ಸಮಯಕ್ಕೆ, ಅವರ ಮನೆಗೆ ತೆರಳಿ ಮತದಾನ ಮಾಡಿಸಿಕೊಳ್ಳುತ್ತಾರೆ. ನೋಂದಾಯಿತ ಮತದಾರ ಏಪ್ರಿಲ್ 25 ಮತ್ತು ಏಪ್ರಿಲ್ 26 ರಂದು ತಮಗೆ ನೀಡಿದ ಸಮಯಕ್ಕೆ ಸರಿಯಾಗಿ ಮನೆಯಲ್ಲಿ ಇದ್ದು, ತಮ್ಮ ಮತದಾನದ ಹಕ್ಕು ಚಲಾಯಿಸಬೇಕು ಎಂದು ಅವರು ಹೇಳಿದರು.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಿ, ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಮತದಾನದ ಪೂರ್ಣ ಪ್ರಕ್ರಿಯೆಯನ್ನು ನಿಯಮದಂತೆ ವಿಡಿಯೋ ಚಿತ್ರಿಕರಣ ಮಾಡಬೇಕು ಎಂದು ಅವರು ತಿಳಿಸಿದರು.