ಸಮಾರೋಪ ಸಮಾರಂಭ
ಲಕ್ಷ್ಮೇಶ್ವರ,ಏ25: `ಮಗುವಿನಲ್ಲಿರುವ ವಿಶ್ವಮಾನವತೆಯನ್ನು ಜತನದಿಂದ ಕಾಯ್ದುಕೊಂಡು ಹೋಗಲು ಅವರನ್ನು ಸಹಜವಾಗಿ ಬೆಳೆಯುವ ಹಾಗೆ ನೋಡಿಕೊಳ್ಳಬೇಕು. ಅಂತಹ ಸಹಜತೆಯನ್ನು ಇಂತಹ ಶಿಬಿರವು ಕಲ್ಪಿಸಿಕೊಡುತ್ತದೆ” ಎಂದು ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಸ್.ಭಜಂತ್ರಿ ಅಭಿಪ್ರಾಯಪಟ್ಟರು. ಅವರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ಹಾಗೂ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ 4 ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಚೈತ್ರದ ಚಿಗುರು’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಿಶ್ರಾಂತ ಶಿಕ್ಷಕ, ಸಾಹಿತಿ ಸಿ.ಜಿ. ಹಿರೇಮಠ “ಸಹಜ ಕಲಿಕೆಯತ್ತ ಮಕ್ಕಳು ಮುಖ ಮಾಡಬೇಕು. ಆಡಿ ಕಲಿ- ಮಾಡಿ ತಿಳಿ ಎಂಬ ತತ್ವವನ್ನು ಆಧರಿಸಿದ ಶಿಕ್ಷಣ ವ್ಯವಸ್ಥೆ ಬರಬೇಕು. ಈ ಶಿಬಿರದಲ್ಲಿ ಅಂತಹ ತತ್ವವನ್ನು ಆಧರಿಸಿ ಚಟುವಟಿಕೆಗಳು ರೂಪಿಗೊಂಡಿರುವುದು ಒಂದು ಅನುಕರಣನೀಯ” ಎಂದರು.
ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಈ ಶಿಬಿರದಲ್ಲಿ ಮಕ್ಕಳೇ ಸ್ವತಹ ಕವಿತೆ ರಚಿಸಿ ಕವಿ ಗೋಷ್ಠಿ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ತಾವೇ ಚಿತ್ರ ಬರೆದು ‘ಚಿತ್ರಕಲಾ ಪ್ರದರ್ಶನ ಆಯೋಜಿಸಿದ್ದು ಮನಸೆಳೆಯುವಂತಿತ್ತು. ಕಥಾ ರಚನೆ, ಮೋಜಿನ ಆಟಗಳು, ಮನೆಯಲ್ಲೇ ಮಾಡಬಹುದಾದ ಸರಳ ಕ್ರಾಫ್ಟ್ ಚಟುವಟಿಕೆಗಳು, ಮಾದರಿಗಳು ಪ್ರದರ್ಶನಗೊಂಡವು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಕಥೆ,ಕವನ,ನಾಟಕ ವಿಭಾಗದ ಆರ್.ಎಸ್. ಪಾಟೀಲ, ಚಿತ್ರಕಲಾ ವಿಭಾಗದ ಪ್ರವೀಣ ಗಾಯಕರ, ಕ್ರಾಫ್ಟ್ ವಿಭಾಗದ ರಾಜೇಶ್ ಉಮಚಗಿ, ಸಂಗೀತ ವಿಭಾಗದ ವಿ.ಎಂ. ಹೂಗಾರ ರವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಬಿ.ಸಣ್ಣಮನಿ, ವಿಶ್ರಾಂತ ಮುಖ್ಯ ಗುರುಮಾತೆ ಶ್ರೀಮತಿ ಡಿ.ಎಫ್.ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಚ್. ಎಂ.ಗುತ್ತಲ, ಡಾ. ಅರ್ಜುನ ವಠಾರ, ಈರಣ್ಣ ಗಾಣಿಗೇರ, ಬಿ. ಬಿ.ದನದಮನಿ ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕುಮಾರ ಅಮೋಘ ಹರಕುಣಿ ಪ್ರಾರ್ಥಿಸಿದನು. ಕಸಾಪ ತಾಲೂಕ ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ನಿರೂಪಿಸಿದರು. ಶ್ರೀಮತಿ ನಿರ್ಮಲ ಅರಳಿ ವಂದಿಸಿದರು.