ಮೋದಿ ಹೇಳಿಕೆಗೆ ಅಶ್ರಫ್ ಆಕ್ರೋಶ
ಬೆಂಗಳೂರು, ಏ.೨೪-: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸುವ ಮುನ್ಸೂಚನೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಹತಾಶರಾಗಿದ್ದಾರೆ. ಆದುದರಿಂದ, ತಮ್ಮ ಚುನಾವಣಾ ಭಾಷಣದಲ್ಲಿ ಮುಸ್ಲಿಮರನ್ನು ಗುರಿಯನ್ನಾಗಿಸಿಕೊಂಡು ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸೈಯದ್ ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂ ಮಹಿಳೆಯರ ಮಂಗಳಸೂತ್ರವನ್ನು ಪಡೆದು ಮುಸ್ಲಿಮರಿಗೆ ಹಂಚಲಿದೆ ಎಂಬ ಅರ್ಥ ಬರುವಂತೆ ಹೇಳಿಕೆ ನೀಡಿರುವುದು ಪ್ರಧಾನಿ ಸ್ಥಾನದಲ್ಲಿರುವವರಿಗೆ ಶೋಭೆ ತರುವಂತದ್ದಲ್ಲ ಎಂದರು.
ದೇಶದ ಬಹುಸಂಖ್ಯಾತ ವಿವಾಹಿತ ಮಹಿಳೆಯರು ಧರಿಸುವ ಮಂಗಳಸೂತ್ರವನ್ನು ತಮ್ಮ ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಲು ಮುಂದಾಗಿರುವ ಮೋದಿ ನಡೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಸ್ವತಃ ಮಹಿಳೆಯರೆ ಕಟುವಾದ ಶಬ್ಧಗಳಿಂದ ಟೀಕಿಸುತ್ತಿದ್ದಾರೆ. ಪ್ರತಿಬಾರಿ ಚುನಾವಣೆ ಬಂದಾಗ ಅಲ್ಪಸಂಖ್ಯಾತರು ಅದರಲ್ಲೂ ವಿಶೇಷವಾಗಿ ಮುಸ್ಲಿಮರನ್ನು ಗುರಿಯಾಗಿಸುವುದು ಎಷ್ಟರಮಟ್ಟಿಗೆ ಸರಿಎಂದು ಅವರು ಪ್ರಶ್ನಿಸಿದರು.
ದೇಶದ ಸ್ವಾತಂತ್ರ್ಯ, ಅಭಿವೃದ್ಧಿಗೆ ಅಲ್ಪಸಂಖ್ಯಾತರ ಕೊಡುಗೆಯೂ ಇದೆ. ದೇಶಕ್ಕಾಗಿ ಮುಸ್ಲಿಮರು ಮಾಡಿರುವ ತ್ಯಾಗ, ಬಲಿದಾನ ಏನು ಎಂಬುದಕ್ಕೆ ಇಂಡಿಯಾ ಗೇಟ್ ಮೇಲೆ ಬರೆದಿರುವ ೬೩ ಸಾವಿರ ಮುಸ್ಲಿಮರ ಹೆಸರುಗಳೇ ಸಾಕ್ಷಿಯಾಗಿವೆ.
ದೇಶದ ಜನಸಂಖ್ಯೆಯಲ್ಲಿ ಶೇ.೫೦ರಷ್ಟು ಮಹಿಳೆಯರು ಇದ್ದಾರೆ. ಮಂಗಳಸೂತ್ರ ಅನ್ನೋದು ಮಹಿಳೆಯರ ಪಾಲಿಗೆ ಅತ್ಯಂತ ಪವಿತ್ರವಾದದ್ದು. ಅದನ್ನು ನಿಮ್ಮ ಚುನಾವಣೆಯ ಪ್ರಚಾರಕ್ಕೆ ಬಳಸಿಕೊಳ್ಳಬೇಡಿ ಎಂದು ಸೈಯದ್ ಅಶ್ರಫ್ ಹೇಳಿದರು.
ನರೇಂದ್ರ ಮೋದಿ ಚುನಾವಣೆ ಪ್ರಚಾರದಲ್ಲಿ ನಿರುದ್ಯೋಗ, ಮಹಿಳೆಯರ ರಕ್ಷಣೆ, ಅಪರಾಧಗಳನ್ನು ನಿಲ್ಲಿಸುವ ವಿಚಾರಗಳ ಬಗ್ಗೆ ಮಾತನಾಡಲಿ. ಅದು ಬಿಟ್ಟು, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಪದೇ ಪದೇ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ. ನಮ್ಮ ಸಹನೆಯನ್ನು ದೌರ್ಬಲ್ಯ ಎಂದು ಪರಿಗಣಿಸುವ ತಪ್ಪು ಮಾಡಬೇಡಿ ಎಂದು ಅವರು ಹೇಳಿದರು.