ಮತದಾನ ಜಾಗೃತಿ
ಬ್ಯಾಡಗಿ,ಏ.25: ಮತದಾನವು ನಾಗರಿಕ ಕರ್ತವ್ಯವಾಗಿದೆ. ಎಂದು ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ ಮಲ್ಲಿಕಾರ್ಜುನ ಹೇಳಿದರು.
ಬುಧವಾರ ಸ್ಥಳೀಯ ತಾಲೂಕಾ ಪಂಚಾಯತ ಕಾರ್ಯಾಲಯದ ಆವರಣದಲ್ಲಿ ತಾಲೂಕಾ ಪಂಚಾಯತ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮುಂಬರುವ ಮೇ.7 ರಂದು ನಡೆಯುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಜಾಗೃತಿಯ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಕುಮಾರಿ ಅಶ್ವಿನಿ ಬಿದರಿ ಹಾಗೂ ಇನ್ನುಳಿದ ಸ್ಪರ್ಧಾಳುಗಳಿಗೆ
ಬಹುಮಾನ ವಿತರಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮತದಾರರು ಯಾವುದೇ ಆಸೆ, ಆಮಿಷ, ಒತ್ತಡಗಳಿಗೆ ಒಳಗಾಗದೆ ಸ್ವಂತ ವಿವೇಚನೆ ಬಳಸಿ ಯೋಗ್ಯ ಅಭ್ಯರ್ಥಿಗೆ ಮತದಾನ ಮಾಡಬೇಕು. ಮತದಾನ ಜಾಗೃತಿ ಮೂಡಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರಿಗೆ ಕಡ್ಡಾಯವಾಗಿ ಮತದಾನದ ಕುರಿತು ಜಾಗೃತಿ ಮೂಡಿಸಬೇಕೆಂದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹಾಧಿಕಾರಿ ಎನ್.ತಿಮ್ಮಾರಡ್ಡಿ, ಸಿಡಿಪಿಒ ವೈ.ಟಿ.ಪೂಜಾರ, ತಾಪಂ ವ್ಯವಸ್ಥಾಪಕ ಪ್ರಕಾಶ ಹಿರೇಮಠ, ಯೋಜನಾಧಿಕಾರಿ ಎಂ.ಎ.ಅಗಸರ, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಎಚ್.ಟಿ.ಲಮಾಣಿ, ಎನ್.ಎಂ.ದೊಡ್ಡಮನಿ, ಪಿಡಿಓ ಜಗದೀಶ ಮಣ್ಣಮ್ಮನವರ, ನಾಗರಾಜ ಅಗಸನಹಳ್ಳಿ, ಅರವಿಂದ ಬಡಿಗೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.