ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣಾ ಬಂದಾಗಲಷ್ಟೇ ಕರ್ನಾಟಕದ ನೆನಪು ಆಗುತ್ತದೆ: ಸಿಎಂ
ಸಂಜೆವಾಣಿ ವಾರ್ತೆ
ಬೀದರ್:ಏ.25: ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣಾ ಬಂದಾಗಲಷ್ಟೇ ಕರ್ನಾಟಕದ ನೆನಪು ಆಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಗಣೇಶ ಮೈದಾನದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ-2 ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 2019ರಲ್ಲಿ ರಾಜ್ಯದಲ್ಲಿ ಭೀಕರ ಪ್ರವಾಹ ಬಂದಿತ್ತು.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು. ಆಗಲೂ ರಾಜ್ಯಕ್ಕೆ ಬರಲಿಲ್ಲ. ಈಗ ರಾಜ್ಯದಲ್ಲಿ ಭೀಕರ ಬರಗಾಲವಿದೆ. ರಾಜ್ಯದ ಜನರ ಸುಖ, ದುಃಖ ಕೇಳಲು ಬರಲಿಲ್ಲ. ಆದರೆ, ಚುನಾವಣೆಯಲ್ಲಿ ಮತ ಕೇಳಲು ಬಂದಿದ್ದಾರೆ. ಇವರಿಗೆ ಯಾವ ಮುಖವಿದೆ ಎಂದು ಪ್ರಶ್ನಿಸಿದರು.
ನಾವು ಚುನಾವಣೆಗೂ ಮುನ್ನ ಹೇಳಿದಂತೆ ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಜನರಿಗೆ ಅದರ ಪ್ರಯೋಜನವಾಗುತ್ತಿದೆ. ನಮಗೆ ಮತ ಕೇಳಲು ನೈತಿಕ ಹಕ್ಕಿದೆ. ಆದರೆ, ಮೋದಿಯವರಿಗೆ ಇದೆಯಾ? ಹಾಗಾಗಿ ಕೇಂದ್ರದ ಬಿಜೆಪಿ ಸರ್ಕಾರವನ್ನು ಈ ಸಲ ಕಿತ್ತೊಗೆಯಬೇಕು. ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕೆಲಸಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸ್ವತಂತ್ರ ಭಾರತದಲ್ಲಿ ಅತಿ ಹೆಚ್ಚು ಸುಳ್ಳು ಹೇಳುವ ಪ್ರಧಾನಿ ನರೇಂದ್ರ ಮೋದಿಯವರು. ಬಿಜೆಪಿ ಸುಳ್ಳಿನ ಕಾರ್ಖಾನೆ. ಸುಳ್ಳು ಬಿಜೆಪಿಯ ಮನೆದೇವರು. ರಾಜ್ಯದಲ್ಲಿ ಐದು ಗ್ಯಾರಂಟಿ ಜಾರಿಗೊಳಿಸಿದಂತೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ 25 ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ. ನಾವು ನುಡಿದಂತೆ ನಡೆದುಕೊಳ್ಳುತ್ತೇವೆ. ಮೋದಿಯವರು ಸುಳ್ಳು ಹೇಳುತ್ತಾರೆ ಹೊರತು ಯಾರಿಗೂ ಸಹಾಯ ಮಾಡಲ್ಲ ಎಂದರು.
ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ ಎರಡೂ ಅಪಾಯದಲ್ಲಿವೆ. ಸಂವಿಧಾನ ಉಳಿದರೆ ಎಲ್ಲರೂ ಉಳಿಯುತ್ತಾರೆ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದೆ. ಬಿಜೆಪಿಯವರು ಹೇಗಾದರೂ ಮಾಡಿ ಸಂವಿಧಾನ ಬದಲಿಸಲು ಕುತಂತ್ರ ನಡೆಸಿದ್ದಾರೆ. ಸರ್ವಾಧಿಕಾರ ತರುವ ಪ್ರಯತ್ನದಲ್ಲಿದ್ದಾರೆ. ಆದರೆ, ಸಂವಿಧಾನ ಮುಟ್ಟಿದರೆ ದೇಶದಲ್ಲಿ ರಕ್ತಕ್ರಾಂತಿ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಚಿವ ಈಶ್ವರ ಬಿ. ಖಂಡ್ರೆ, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ಮೀನುಗಾರಿಕೆ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಧನರಾಜ ತಾಳಂಪಳ್ಳಿ, ರಾಜಶೇಖರ ಪಾಟೀಲ ಹುಮನಾಬಾದ್, ವಿಜಯ್ ಸಿಂಗ್, ಅಶೋಕ ಖೇಣಿ, ಭೀಮಸೇನರಾವ ಶಿಂಧೆ, ಗೀತಾ ಪಂಡಿತರಾವ್ ಚಿದ್ರಿ, ಮೀನಾಕ್ಷಿ ಸಂಗ್ರಾಮ, ಪರಿಹಾರ ಮಲ್ಲಿಕಾರ್ಜುನ, ಆನಂದ ದೇವಪ್ಪ ಮೊದಲಾದವರು ಹಾಜರಿದ್ದರು.