ಸಂಭ್ರಮದ ಹರಿ-ಹರರ ಕಲ್ಲುಗಾಲಿ ಬ್ರಹ್ಮರಥೋತ್ಸವ
ವಿಜಯಪುರ.ಏ.೨೫- ಇಲ್ಲಿನ ಗಾಂಧಿಚೌಕದಲ್ಲಿ ಶ್ರೀ ನಗರೇಶ್ವರಸ್ವಾಮಿ ಮತ್ತು ಆದಿನಾರಾಯಣಸ್ವಾಮಿರವರ ೯ ನೇ ವರ್ಷದ ಕಲ್ಲುಗಾಲಿ ಬ್ರಹ್ಮರಥೋತ್ಸವ ಹಾಗೂ ಬಲಮುರಿ ಗಣಪತಿ, ಶ್ರೀ ಭದ್ರಕಾಳೀ ಸಮೇತ ಶ್ರೀ ರುದ್ರದೇವರ ಬ್ರಹ್ಮರಥೋತ್ಸವ ಕಾರ್ಯಕ್ರಮ ಸಾವಿರಾರು ಜನರ ಮಧ್ಯದಲ್ಲಿ ಹರ-ಹರ ಮಹದೇವ ಹಾಗೂ ಗೋವಿಂದ ನಾಮಸ್ಮರಣೆಗಳ ಮಧ್ಯೆ ನೂತನವಾಗಿ ಜಯ್ ಶ್ರೀರಾಮ್ ನಾಮಸ್ಮರಣೆಯೂ ಸೇರಿದಂತೆ ವಿಜೃಂಭಣೆಯಿಂದ ನಡೆಯಿತು.
ವೈಜ್ಞಾನಿಕತೆ ಎಷ್ಟೇ ಪ್ರಗತಿ ಹೊಂದಿದ್ದರೂ ಸಹ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವಿಚಾರಗಳು ಪ್ರತಿಯೊಬ್ಬರ ಮನಸ್ಸಿನ ನೆಮ್ಮದಿಯನ್ನು ಹೆಚ್ಚಿಸುತ್ತವೆ. ಈ ನಿಟ್ಟಿನಲ್ಲಿ ರಥೋತ್ಸವ, ಜಾತ್ರೆಯಂತಹ ಕಾರ್ಯಕ್ರಮಗಳು ಎಲ್ಲರಿಗೂ ಸಹಕಾರಿ ಎಂದು ನಗರೇಶ್ವರಸ್ವಾಮಿ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎಂ.ಸತೀಶ್‌ಕುಮಾರ್ ತಿಳಿಸಿದರು.
ಪುರಸಭಾ ಮಾಜಿ ಸದಸ್ಯರಾದ ಎಸ್.ಭಾಸ್ಕರ್ ಮಾತನಾಡಿ, ಪುರಾತನ ಕಾಲದಿಂದಲೂ ನಡೆದುಕೊಂಡು ಬರುತ್ತಿದ್ದ ಶ್ರೀ ನಗರೇಶ್ವರ ಸ್ವಾಮಿ ಜಾತ್ರೆಯು ಕಾಲಾನಂತರ ನಿಂತು ಹೋಗಿದ್ದು, ಇಂದಿನ ನಗರ್ತ ಯುವಕ ಸಂಘ, ಮಹಿಳಾ ಸಂಘ, ಮಹಂತಿನ ಮಠ ಹಾಗೂ ಭಕ್ತರ ಸಹಕಾರದೊಂದಿಗೆ ಇತಿಹಾಸ ಮರುಕಳಿಸಿರುವುದು ಇಲ್ಲಿನ ಸಾಂಸ್ಕೃತಿಕ ಪರಿಸರದ ಶುಭ ಸೂಚಕವಾಗಿದೆ ಎಂದು ತಿಳಿಸಿದರು.
ಗೋವಿಂದ ನಾಮ ಸ್ಮರಣೆ ಮತ್ತು ಹರಹರ ಮಹದೇವ ಎಂಬ ಘೋಷಣೆ ಮತ್ತು ಹರ್ಷೋದ್ದಾರಗಳೊಂದಿಗೆ, ರಥೋತ್ಸವವನ್ನು ಗಂಗಾತಾಯಿ ದೇವಾಲಯದ ವೃತ್ತದವರೆಗೆ ಎಳೆಯಲಾಯಿತು. ನಂತರ ರಾತ್ರಿ ಮತ್ತೆ ಗಾಂಧಿಚೌಕಕ್ಕೆ ಪುನಃ ಎಳೆತಂದು ನಿಲ್ಲಿಸಲಾಯಿತು.
ಮಹಂತಿನ ಮಠದ ಅಧ್ಯಕ್ಷರಾದ ಪುನೀತ್ ಕುಮಾರ್, ಆರ್.ಸಿ ಮಂಜುನಾಥ್. ಶ್ರೀ ನಗರೇಶ್ವರಸ್ವಾಮಿ ದೇವಾಲಯ ಅಭಿವೃದ್ದಿ ಟ್ರಸ್ಟ್‌ನ ಅಧ್ಯಕ್ಷ ದಿನೇಶ್, ನಗರೇಶ್ವರ ಸೇವಾ ಟ್ರಸ್ಟ್‌ನ ಅಧ್ಯಕ್ಷರಾದ ಮುರಳೀಧರ್, ಗೌರವಾಧ್ಯಕ್ಷ ಎನ್.ರುದ್ರಮೂರ್ತಿ, ಯುವಕ ಸಂಘದ, ರಥೋತ್ಸವ ಸಮಿತಿ,ಪದಾಧಿಕಾರಿಗಳು, ಪುರಸಭಾ ಸದಸ್ಯರುಗಳು, ಪಟ್ಟಣದ ನಗರ್ತ ಜನಾಂಗದ ಮುಖಂಡರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಗಾಣಿಗರ ಸಂಘದ ಮುಖ್ಯಸ್ಥರು ರಥೋತ್ಸವದ ಹಿಂದೆ ಭಾಗವತ ಸಂಕೀರ್ತನೆ ನಡೆಸಿಕೊಂಡು ಬಂದರು.
ರುದ್ರದೇವರ ರಥೋತ್ಸವ;- ಇದೇ ಸಂದರ್ಭದಲ್ಲಿ ನೂತನ ನಗರೇಶ್ವರಸ್ವಾಮಿ ಬ್ರಹ್ಮರಥೋತ್ಸವದ ಮುಂಭಾಗದಲ್ಲಿಯೇ ಕಲಾರತ್ನ ದಿವಂಗತ ರಾಜಶೇಖರಪ್ಪನವರಿಂದ ನಿರ್ಮಿಸಲ್ಪಟ್ಟ ಶ್ರೀ ಬಲಮುರಿ ಗಣಪತಿ, ಶ್ರೀ ಭದ್ರಕಾಳೀಸಮೇತ ರುದ್ರದೇವರ ಚಿಕ್ಕದಾದ ಬ್ರಹ್ಮರಥೋತ್ಸವವನ್ನು ಎಂದಿನಂತೆ ಏರ್ಪಡಿಸಲಾಗಿದ್ದು, ವಿಶೇಷವೆಂದರೆ ಈ ರಥವನ್ನು ಕಿರಿಯ ವಯಸ್ಸಿನ ಮಕ್ಕಳೇ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಎಳೆಯುವುದು ವಿಶೇಷವಾಗಿರುತ್ತದೆ.