ನಟಿ ಅಮೂಲ್ಯ ಮಾವ, ಬಿಜೆಪಿ ಮುಖಂಡನ ನಿವಾಸದ ಮೇಲೆ ದಾಳಿ
ಬೆಂಗಳೂರು,ಏ.೨೫-ಸ್ಯಾಂಡಲ್ ವುಡ್ ನಟಿ ಅಮೂಲ್ಯ ಅವರ ಮಾವ,ಬಿಜೆಪಿ ಮುಖಂಡ ರಾಮಚಂದ್ರ ಅವರ ರಾಜರಾಜೇಶ್ವರಿನಗರದ ಮನೆ ಮೇಲೆ ಚುನಾವಣಾ ಅಧಿಕಾರಿಗಳು ನಿನ್ನೆ ತಡರಾತ್ರಿ ದಾಳಿ ನಡೆಸಿದ್ದಾರೆ.
ರಾಜರಾಜೇಶ್ವರಿನಗರದ ರಾಮಚಂದ್ರ ಅವರ ನಿವಾಸದ ಮೇಲೆ ರಾತ್ರಿ ೧೦ ಗಂಟೆ ಸುಮಾರಿಗೆ ದಾಳಿ ನಡೆದಿದ್ದು, ಮುಂಜಾನೆಯವರೆಗೂ ಪರಿಶೀಲನೆ ನಡೆಸಿದ್ದಾರೆ.
೧೦ ವಾಹನಗಳಲ್ಲಿ ಬಂದ ಸುಮಾರು ೩೦ಕ್ಕೂ ಹೆಚ್ಚು ಅಧಿಕಾರಿಗಳಿಂದ ಪರಿಶೀಲನೆ ನಡೆದಿದ್ದು, ರಾಮಚಂದ್ರ, ನಟಿ ಅಮೂಲ್ಯ ಮತ್ತವರ ಪತಿ ಜಗದೀಶ್ ಮನೆಯಲ್ಲೇ ಇದ್ದರು.
ನಿರಂತರ ಪರಿಶೀಲನೆಯ ನಂತರ ಮನೆ ಕೆಲಸದವರನ್ನು ಒಬ್ಬೊಬ್ಬರನ್ನಾಗಿ ಮನೆ ಒಳಗಿನಿಂದ ಹೊರ ಬಿಡಲಾಯಿತು. ಸತತ ೪ ಗಂಟೆಗಳ ಕಾಲ ಶೋಧ ಕಾರ್ಯ ನಡೆದ ಬಳಿಕ ಚುನಾವಣಾ ಅಧಿಕಾರಿಗಳ ದಾಳಿ ಅಂತ್ಯವಾಗಿದ್ದು, ಕೆಲವು ದಾಖಲೆಗಳನ್ನು ಪಡೆದು ಅಧಿಕಾರಿಗಳು ತೆರಳಿದ್ದಾರೆ.
ಚುನಾವಣಾ ಅಧಿಕಾರಿಗಳು, ಅಬಕಾರಿ ಪೊಲೀಸ್, ವಾಣಿಜ್ಯ ತೆರಿಗೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದಾರೆ ಎಂದು ಗೊತ್ತಾಗಿದೆ. ದಾಳಿ ವೇಳೆ ಯಾವುದೇ ಅಕ್ರಮ ಹಣವಾಗಲಿ, ಅಕ್ರಮ ಮದ್ಯ ಆಗಲಿ, ಅಕ್ರಮ ಚಿನ್ನಾಭರಣವಾಗಲೀ ಪತ್ತೆಯಾಗಿಲ್ಲ. ದಾಳಿಯ ಮಾಹಿತಿ ತಿಳಿದು ಬಿಜೆಪಿ ಕಾರ್ಯಕರ್ತರು ಮನೆ ಬಳಿ ಜಮಾಯಿಸಿದ್ದರು. ದಾಳಿ ಮುಗಿಸಿ ಹೊರಟ ಅಧಿಕಾರಿಗಳಿಗೆ “ಚೊಂಬು ಸಿಗ್ತಾ, ಚೊಂಬು- ಡಿಕೆ ಚೊಂಬು” ಎಂದು ಬಿಜೆಪಿ ಕಾರ್ಯಕರ್ತರು ವ್ಯಂಗ್ಯ ಮಾಡಿದರು. ಮನೆ ಮುಂದೆ ಜಮಾಯಿಸಿದ್ದ ಕಾರ್ಯಕರ್ತರು ಕಾಂಗ್ರೆಸ್‌ಗೆ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮನೆ ಮೇಲೆ ದಾಳಿ ಮಾಡಿಸಿದ್ದಾರೆ ಎಂದು ಬಿಜೆಪಿ ಮುಖಂಡ ರಾಮಚಂದ್ರ ದೂರಿದ್ದಾರೆ.ಕಾಂಗ್ರೆಸ್‌ನವರು ಈ ಭಾಗದಲ್ಲಿ ಇಂದು ಹಣ ಹಂಚಿಕೆ ಮಾಡ್ತಿದ್ದರು,ಅದಕ್ಕೆ ನಾವು ಅಡ್ಡಿ ಪಡಿಸುತ್ತೇವೆ ಎಂದು ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ.
ದಾಳಿ ವೇಳೆ ಆರ್‌ಓಗೆ ಪದೇ ಪದೆ ಪೋನ್ ಬರುತ್ತಿತ್ತು. ಅವರನ್ನು ಎರಡು ದಿನಕ್ಕಾದರೂ ಒಳಕ್ಕೆ ಹಾಕಿಸಿ ಎಂದು ಹೇಳುತ್ತಿದ್ದರು ಎಂದು ರಾಮಚಂದ್ರ ತಿಳಿಸಿದ್ದಾರೆ.
ಮೊಮ್ಮಕ್ಕಳ ಹುಟ್ಟುಹಬ್ಬಕ್ಕಾಗಿ ಮದ್ಯ ತರಿಸಿದ್ದೆ. ಚುನಾವಣೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹುಟ್ಟುಹಬ್ಬ ಮಾಡಬಾರದು ಎಂದು ಸುಮ್ಮನಾಗಿದ್ದೆವು. ಅದನ್ನು ವಶಕ್ಕೆ ಪಡೆದಿದ್ದಾರೆ. ಏನು ವಶಕ್ಕೆ ಪಡೆದಿದ್ದೇವೆ ಎನ್ನುವುದಕ್ಕೆ ಒಂದು ಸಹಿ ಪಡೆದಿದ್ದಾರೆ” ಎಂದಿದ್ದಾರೆ.