ಮಲೇರಿಯಾ ಬಗ್ಗೆ ಮುಂಜಾಗ್ರತೆ ವಹಿಸಿ
ಕಲಬುರಗಿ :ಏ.25: ಚಳಿ, ಜ್ವರ, ನಡುಕ ಇವುಗಳ ಮಲೇರಿಯಾದ ಪ್ರಮುಖ ಲಕ್ಷಣಗಳಾಗಿದ್ದು, ಇವುಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ, ತಕ್ಷಣ ರಕ್ಷ ಪರೀಕ್ಷೆ ಮಾಡಿಸಿ ಅದಕ್ಕೆ ಸೂಕ್ತವಾದ ಚಿಕಿತ್ಸೆ ಪಡೆದುಕೊಳ್ಳಬೇಕು. ಮಲೇರಿಯಾದ ಬಗ್ಗೆ ಭಯ ಪಡೆ, ಮುಂಜಾಗ್ರತೆ ವಹಿಸಿ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನಿಡಿದರು.
ನಗರದ ಶೇಖರೋಜಾದಲ್ಲಿರುವ ‘ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಗುರುವಾರ ಜರುಗಿದ ‘ವಿಶ್ವ ಮಲೇರಿಯಾ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸೋಂಕಿತ ಅನಾಫಿಲೀಸ್ ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಕಾಯಿಲೆ ಬರುತ್ತದೆ. ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಮನೆ ಸುತ್ತ ನೀರು ಸಂಗ್ರಹವಾಗದಂತೆ ನೋಡಿಕೊಂಡು ಸ್ವಚ್ಛತೆಯನ್ನು ಕಾಪಾಡುವುದು, ನೀರಿನ ಸಂಗ್ರಹಗಳನ್ನು ಭದ್ರವಾಗಿ ಮುಚ್ಚಿಡುವುದು, ಸೊಳ್ಳೆ ಪರದೆ ಮತ್ತು ನಿರೋಧಕಗಳನ್ನು ಬಳಸುವುದು, ಕಾಯಿಸಿ, ಆರಿಸಿದ ಶುದ್ಧವಾದ ನೀರನ್ನು ಕುಡಿಯುವುದು, ಸಮತೋಲಿತ ಆಹಾರವನ್ನು ಸೇವಿಸುವುದು, ಮಳೆಯಲ್ಲಿ ನೆನೆಯದಂತೆ ಲಕ್ಷ್ಯವಹಿಸುವುದು ಸೇರಿದಂತೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವದರ ಮೂಲಕ ಮಲೇರಿಯಾ ಕಾಯಿಲೆ ಬರದಂತೆ ತಡೆಯಬಹುದಾಗಿದೆ ಎಂದು ಅನೇಕ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ನಾಗೇಶ್ವರಿ ಮುಗಳಿವಾಡಿ, ಶ್ರೀದೇವಿ, ಅರ್ಚನಾ ಸಿಂಗೆ, ಮಂಗಲಾ ಚಂದಾಪುರೆ, ನಾಗಮ್ಮ, ಕಿರಣ, ಸಿದ್ರಾಮ ಸೇರಿದಂತೆ ಮತ್ತಿತರರಿದ್ದರು.