ತೆರಿಗೆ ಹಕ್ಕು ಆಂದೋಲನಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ಡಿಕೆಶಿ
ರಾಮನಗರ,ಏ.೨೫- ನಮ್ಮ ತೆರಿಗೆ ನಮ್ಮ ಹಕ್ಕಿಗಾಗಿ ಡಿ.ಕೆ.ಸುರೇಶ್ ನಡೆಸಿದ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಜಯ ಕೊಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಡಿ.ಕೆ.ಸುರೇಶ್ ಪರ ಸೇರಿದ್ದ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಡಿ.ಕೆ.ಸುರೇಶ್ ಅವರನ್ನು ನೀವು ಸಂಸದರಾಗಿ ಆಯ್ಕೆ ಮಾಡಿ ಕಳುಹಿಸಿದ್ದಕ್ಕೆ ನಮ್ಮ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯಯುತ ಹಕ್ಕಿಗಾಗಿ ಧ್ವನಿ ಎತ್ತಿದರು. ಅದರ ಫಲವಾಗಿ ಕರ್ನಾಟಕಕ್ಕೆ ಬರಗಾಲದಲ್ಲಿ ಹಣ ನೀಡಬೇಕು, ತೆರಿಗೆ ಪಾಲನ್ನು ನ್ಯಾಯಯುತವಾಗಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ. ಇದು ಡಿ.ಕೆ.ಸುರೇಶ್ ಅವರ ಹೋರಾಟದ ಮೊದಲ ಜಯ ಎಂದರು.
ಜಿಲ್ಲೆಯ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಮೇಲೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಂಬಿಕೆ, ವಿಶ್ವಾಸವಿಲ್ಲ. ಆಗಾಗಿ ಮಂಡ್ಯಕ್ಕೆ ಹೋಗಿ ಸ್ಪರ್ಧೆ ಮಾಡಿದ್ದಾರೆ. ಹಲವು ವರ್ಷಗಳಿಂದ ದುಡಿದ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರ ಕಥೆ ಏನು, ಹಾಸನದಲ್ಲಿ ಮೊಮ್ಮಗ, ಮಂಡ್ಯದಲ್ಲಿ ಮಗ, ಬೆಂಗಳೂರು ಗ್ರಾಮಾಂತರದಲ್ಲಿ ಅಳಿಯನನ್ನು ಸ್ಪರ್ಧೆ ಮಾಡಿಸಿದ್ದಾರೆ. ಮೋಸ ಹೋಗಬೇಡಿ ಕುಟುಂಬ ರಾಜಕಾರಣ ಮಾಡುವವರನ್ನು ಬಿಟ್ಟು ಅಭಿವೃದ್ದಿ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ, ಜೆಡಿಎಸ್ ಮುಖಂಡರೆಲ್ಲರೂ ಬೆಂಬಲಿಸಿ ಡಿ.ಕೆ.ಸುರೇಶ್ ಕೈ ಬಲಪಡಿಸಿ ಎಂದು ಬಹಿರಂಗವಾಗಿ ಕಾಂಗ್ರೆಸ್ ಸೇರುವಂತೆ ಮುಕ್ತ ಆಹ್ವಾನ ನೀಡಿದರು.
ಎಚ್.ಡಿ.ದೇವೇಗೌಡರದ್ದು ದ್ವೇಷ, ದ್ವೇಷ ರಾಜಕಾರಣ, ಜೆಡಿಎಸ್ ಮುಳುಗಿದ ಹಡಗು ಆಗಿದೆ. ಕರ್ನಾಟಕದಲ್ಲಿ ಮೂರು ಸ್ಥಾನಗಳಿಗಾಗಿ ಜೆಡಿಎಸ್ ಪಕ್ಷವನ್ನು ಬಿಜೆಪಿಗೆ ಅಡವಿಟ್ಟರು. ಹಾಸನ, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ. ಎಚ್.ಡಿ.ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸ್ಲೀಂ ಆಗಿ ಹುಟ್ಟುತ್ತೇನೆ ಎಂದಿದ್ದರು. ಈಗ ಕುಮಾರಣ್ಣ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತ ಬೇಕಿಲ್ಲ ಎನ್ನುತ್ತಿದ್ದಾರೆ, ಕುಮಾರಣ್ಣ ಚನ್ನಪಟ್ಟಣದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆಗೆ ಬಾ ಅಲ್ಪಸಂಖ್ಯಾತರು ಏನು ಎಂಬುದನ್ನು ತೋರಿಸುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಪ್ರಜಾಧ್ವನಿ ಯಾತ್ರೆಯಲ್ಲಿ ಘೋಷಿಸಿದಂತೆ ೨೦೦ ಯುನಿಟ್ ಉಚಿತ, ಮಹಿಳೆಯರಿಗೆ ೨ ಸಾವಿರ ಖಚಿತ, ಉಚಿತ ಬಸ್ಸು ಸಂಚಾರ, ಬಡವರಿಗೆ ಅನ್ನಭಾಗ್ಯ ನೀಡಿದವರು ನಾವು, ಕುಮಾರಸ್ವಾಮಿ ನೀನು ಈ ಕೆಲಸ ಮಾಡಲಿಲ್ಲ. ಜನರ ನಿರೀಕ್ಷೆಯನ್ನು ಸಮಸ್ಯೆಗಳನ್ನು ಮಾಡದೆ ಮಾತಿಗೆ ತಪ್ಪಿದ್ದು, ಜನರಲ್ಲಿ ನಿಮ್ಮಗಳ ಮೇಲೆ ವಿಶ್ವಾಸವಿಲ್ಲದ ಕಾರಣ ಜಿಲ್ಲೆಯ ಜನರಿಗೆ ಮೋಸ ಮಾಡಿ ಮಂಡ್ಯ ಕ್ಷೇತ್ರದತ್ತ ಹೋಗಿದ್ದೀರಿ, ಆದರೆ ನನ್ನ ಜಿಲ್ಲೆಯ ಜನರನ್ನು ನಾನು ರಕ್ಷಣೆ ಮಾಡಿಕೊಳ್ಳುತ್ತೇನೆ ಎಂದು ಭಾಷಣದುದ್ದಕ್ಕೂ ಕ್ಷೇತ್ರದ ಜನರಿಗೆ ಎಚ್ಡಿ ಕುಮಾರಸ್ವಾಮಿ ಅವರ ಕೊಡುಗೆ ಶೂನ್ಯ, ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಚಾಟಿ ಬೀಸಿದರು.
ಜಿಲ್ಲೆಗೆ ೯೦೦ ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದೇನೆ. ಎಚ್.ಡಿ.ಕುಮಾರಸ್ವಾಮಿ ಅವರು ಏನು ಮಾಡಿದ್ದಾರೆ. ೧೭ ವರ್ಷದಲ್ಲಿ ಬಡವರಿಂದ ೫,೧೦೦ ಕಟ್ಟಿಸಿಕೊಂಡವರು ಇದುವರೆಗೂ ನಿವೇಶನ ನೀಡಿಲ್ಲ. ಈಗ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ನೀಡಲು ನಮ್ಮ ಪಕ್ಷದ ಶಾಸಕ ಇಕ್ಬಾಲ್ ಹುಸೇನ್ ಇದ್ದಾರೆ. ಪಟ್ಟಣದಲ್ಲಿ ಅರ್ಹರಿಗೆ ನಿವೇಶನ ಕೊಡಲು ಸೂಚಿಸಿದ್ದೇನೆ. ಕೇಂದ್ರದ ಬಿಜೆಪಿ ಸರ್ಕಾರ ಯುವಕರಿಗೆ ಉದ್ಯೋಗ ಕೊಡಲಿಲ್ಲ, ೧೫ ಲಕ್ಷ ರೈತರ ಖಾತೆಗೆ ಹಾಕಿದರ ಇಲ್ಲ. ರಾಜ್ಯದ ಜನರಿಗೆ ಕೇಂದ್ರದ ಬಿಜೆಪಿ ಸರ್ಕಾರ ಕೊನೆಗೆ ಕೊಟ್ಟಿದ್ದು ಚೊಂಬು, ಚೊಂಬು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆಮಾಡಿ ಡಿ.ಕೆ.ಶಿವಕುಮಾರ್ ಅವರಿಗೆ ಶಕ್ತಿ ತುಂಬಿದ್ದೀರಿ, ನನಗೂ ಮೂರು ಭಾರಿ ಸಂಸದನಾಗಿ ಮಾಡಿದ್ದೀರಿ, ರಾಮನಗರದ ಅಭಿವೃದ್ದಿಗೆ ೧೫೦ ಕೋಟಿ ರೂ ಅನುದಾನ, ಉದ್ಯಾನವನ ನಿರ್ಮಾಣ, ೧೬೫ ಕೋಟಿ ರೂ ವೆಚ್ಚದಲ್ಲಿ ಅರ್ಕಾವತಿ ನದಿಯ ಎರಡು ದಂಡೆಯಲ್ಲಿ ಪಾಥ್ ಅಭಿವೃದ್ಧಿ, ೮೦ ಎಕರೆ ಪ್ರದೇಶ ಗುರ್ತಿಸಿದ್ದು, ೪ ರಿಂದ ೫ ಸಾವಿರ ಬಡವರಿಗೆ ನಿವೇಶನ ನೀಡಲು ಕ್ರಮ ವಹಿಸಲಾಗಿದೆ. ಸರ್ಕಾರ ೫ ಗ್ಯಾರಂಟಿಗಳನ್ನು ನೀಡಿದ್ದು, ನಗರದ ನಿವಾಸಿಗಳಿಗೆ ಆಗಸ್ಟ್ ೧೫ ರ ಧ್ಚಜಾರೋಹಣ ದಿನದಂದು ಸಮರ್ಪಕ ಕುಡಿಯುವ ನೀರು ಪೂರೈಸಲು ಚಾಲನೆ ನೀಡುವ ಚಿಂತನೆ ಮಾಡಿದ್ದೇನೆ. ನನ್ನ ಕ್ರಮ ಸಂಖ್ಯೆ ೨ ರ ಹಸ್ತದ ಗುರ್ತಿಗೆ ಮತ ನೀಡಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಪ್ರಚಾರ ವೇಳೆ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್, ನಾರಾಯಣಗೌಡ, ಮಳವಳ್ಳಿ ಸೋಮಶೇಖರ್, ಮಾಜಿ ಶಾಸಕ ಕೆ.ರಾಜು, ಕೆಪಿಸಿಸಿ ಉಪಾಧ್ಯಕ್ಷ ಸಯ್ಯದ್ ಜಿಯಾವುಲ್ಲಾ, ಎಂಇಐ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಸಿಎನ್‌ಆರ್ ವೆಂಕಟೇಶ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಡಾ.ದೀಪಾಮುನಿರಾಜು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗುರುಪ್ರಸಾದ್, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ ಮತ್ತು ಸದಸ್ಯರು ಸೇರಿದಂತೆ ಹಿರಿಯ ಕಿರಿಯ ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.