ಪುಸ್ತಕ ಸಂಸ್ಕೃತಿಗೆ ಅಳಿವಿಲ್ಲ: ಮಾನಸ
ಸಂಜೆವಾಣಿ ನ್ಯೂಸ್
ಮೈಸೂರು:ಏ.25:-ಪುಸ್ತಕ ಸಂಸ್ಕೃತಿಗೆ ಯಾವತ್ತೂ ಅಳಿವಿಲ್ಲ. ಮನುಷ್ಯನಲ್ಲಿ ಜೀವನ ಪ್ರೀತಿ ಇರುವವರೆಗೂ ಹೊತ್ತಿಗೆಯ ಸಂಘ ಇರುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಕಲಾಕೂಟ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನಿಂದ ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ವಿಶ್ವಪುಸ್ತಕ ದಿನಾಚರಣೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಪುಸ್ತಕ ಓದುವ ಸಂಸ್ಕೃತಿಯನ್ನು ರಾಜ್ಯಾದ್ಯಂತ ವ್ಯಾಪಿಸುವುದು ಪ್ರಾಧಿಕರದ ಗುರಿಯಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಒಂದಾದರೂ ಪುಸ್ತಕಗಳಿರಬೇಕು ಎಂದರು.
ವಿಧಾನಪರಿಷತ್ ಸದಸ್ಯ ಡಾ. ಡಿ.ತಿಮ್ಮಯ್ಯ ಮಾತನಾಡಿ, ಜನರ ಜ್ಞಾನದಾಹ ಪೂರೈಸುವಲ್ಲಿ ಪುಸ್ತಕಕ್ಕಿಂತ ಅಗತ್ಯವಾದ ವಸ್ತು ಬೇರೊಂದಿಲ್ಲ. ಡಿಜಿಟಲ್ ಯುಗದಲ್ಲಿಯೂ ಭೌತಿಕವಾಗಿ ದೊರೆಯುವ ಪುಸ್ತಕಗಳು ನಮ್ಮಲ್ಲಿ ಉಂಟುಮಾಡುವ ಪರಿಣಾಮ ಭಿನ್ನ. ಪುಸ್ತಕ ಕೊಂಡು ಓದುವ ಸಂಸ್ಕೃತಿ ಹೆಚ್ಚಬೇಕು ಎಂದರು.
ಪ್ರಧಾನ ಗುರುದತ್ ಮಾತನಾಡಿ, ಆಧುನಿಕ ಯುಗದಲ್ಲೂ ಜ್ಞಾನರ್ಜನೆಯಲ್ಲಿ ಪುಸ್ತಕ ವಿಶ್ವಾಸಾರ್ಹ. ಎಲ್ಲ ಸಂದರ್ಭದಲ್ಲೂ ಪುಸ್ತಕದ ಸಂಘದಲ್ಲಿರುವುದು ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದರು.
ವಿವಿಧ ಶಾಲೆಗಳಿಗೆ ಡಾ. ಎಂ.ಜಿ.ಆರ್. ಅರಸ್ ಅವರು ಪುಸ್ತಕಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಎಸ್ ಟಿ ರವಿಕುಮಾರ್ ಅಧ್ಯಕ್ಷ ಎಂ ಚಂದ್ರಶೇಖರ್, ಪರಿಷತ್ ಅಧ್ಯಕ್ಷೆ ರತ್ನಾ ಹಾಲಪ್ಪ ಗೌಡ ಇದ್ದರು.