ಕಾಂಗ್ರೆಸ್ ನಲ್ಲಿ ಅವಕಾಶ ಸಿಗದ್ದಕ್ಕೆ ಬಿಜೆಪಿ ಸೇರ್ಪಡೆಗೊಂಡೆ
ಸಂಜೆವಾಣಿ ನ್ಯೂಸ್
ಮೈಸೂರು:ಏ.25:- ಆರೋಗ್ಯಕ್ಷೇತ್ರದಲ್ಲಿದ್ದ ನಾನು ಜನತೆಗೆ ಏನಾದರೂ ದುಡಿಯಬೇಕೆಂಬ ಗುರಿಯೊಂದಿಗೆ ಕಾಂಗ್ರೆಸ್ ನಲ್ಲಿದ್ದ ಅದಕ್ಕೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಮೋದಿಯವರ ವಿಷನರಿ ಕಾರ್ಯಗಳ ಮೆಚ್ಚಿ ಬಿಜೆಪಿ ಸೇರಿದೆ ಎಂದು ಬಿಜೆಪಿ ಮುಖಂಡ ಸುಶ್ರುತ ಗೌಡ ತಿಳಿಸಿದರು.
ಮೈಸೂರಿನ ಬಿಜೆಪಿ ಕಚೇರಿಗೆ ಮೊದಲ ಬಾರಿಗೆ ಆಗಮಿಸಿ ನಗರಾಧ್ಯಕ್ಷ ಎಲ್.ನಾಗೇಂದ್ರ ಅವರಿಂದ ಸ್ವಾಗತಿಸಿಕೊಂಡ ಬಳಿಕ ಮಾತನಾಡಿದ ಅವರು, ರಾಹುಲ್ ಗಾಂಧಿಯವರ ಭಾರತ್ ಜೋಡೋ ಪ್ರಾರಂಭವಾದಾಗ ಅದನ್ನು ಅರಿಯುವ ದೃಷ್ಟಿಯಿಂದ ಕನ್ಯಾಕುಮಾರಿ ಯಿಂದ ಕಾಶ್ಮೀರದವರೆಗಿನ 3570 ಕಿ.ಮೀ. ಹೆಜ್ಜೆ ಹಾಕಿದ್ದೇನೆ. ಅಲ್ಲಿಯವರೆಗೂ ಯಾವ ಪಕ್ಷ ಸೇರಿರಲಿಲ್ಲ. ಅದಾದ ಬಳಿಕ ಜನಸೇವೆಗೆ ಶ್ರಮಿಸಲು ಹಾಗೂ ನನ್ನ ಆಲೋಚನೆ ಜಾರಿಗೆ ಅವಕಾಶ ಸಿಗಬಹುದೆಂದು ಒಂದು ವರ್ಷಗಳ ಕಾಲ ಕಾದಿದ್ದೇನೆ. ಹೀಗಾಗಿ ಮೈಸೂರು-ಕೊಡಗು ಕ್ಷೇತ್ರದ ಆಕಾಂಕ್ಷಿಯಾಗಿ ಅರ್ಜಿ ಹಾಕಿದ್ದೆ ಆಗಲೂ ಅವಕಾಶ ಸಿಗಲಿಲ್ಲ. ಬಡ ಜನರಿಗೆ ಉಚಿತ ಗ್ಯಾರಂಟಿಯಿಂದ ಯಾವುದೇ ಉದ್ಯೋಗ ಸೃಷ್ಠಿಯಾಗಿಲ್ಲ. ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಕೊಡಬೇಕೆಂಬುದು ನನ್ನ ಆಶಯ. ಇದಕ್ಕೆ ಕಾಂಗ್ರೆಸ್ ನಲ್ಲಿ ಅವಕಾಶ ಸಿಗುತ್ತೇ ಅನ್ನೋ ನಂಬಿಕೆ ಸಿಗಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಬದ್ಧತೆ, ಕಾರ್ಯಶಮತೆ ಮೆಚ್ಚಿ ಬಿಜೆಪಿ ಸೇರಿದ್ದೇನೆ. ಕೆಪಿಸಿಸಿ ಕಾರ್ಯದರ್ಶಿ ಹುದ್ದೆ ಕೊಟ್ಟಿದ್ದರೂ ಅದರಿಂದ ಯಾವುದೇ ಬದಲಾವಣೆ ತರಲು ಆಗಲ್ಲ. ಪಕ್ಷದೊಳಗೂ ನಮ್ಮ ಮಾತಿಗೆ ಮನ್ನಣೆ ಇರಲಿಲ್ಲ. ಕಾಂಗ್ರೆಸ್ ನ ಬಗ್ಗೆ ಯಾವುದೇ ದ್ವೇಷವಿಲ್ಲ. ಮೈಸೂರು- ಕೊಡಗು ಕ್ಷೇತ್ರಕ್ಕೆ ವಿಷನರಿ ಅಭ್ಯರ್ಥಿ ಬರಬೇಕೆಂದು ಭಾವಿಸಿದ್ದೇನೆ. ಅದಕ್ಕೆ ಯದುವೀರ್ ಅವರು ಸೂಕ್ತ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರ ಕರೆ ಸ್ವೀಕರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ನಾ ಏಕೆ ಪಕ್ಷ ತೊರೆದೆ ಎಂದು ಹೇಳಿಕೊಳ್ಳುತ್ತೇನೆಂದರು. ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾದ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ನಗರ ವಕ್ತಾರ ಮೋಹನ್, ಸಂತೋಷ ಇನ್ನಿತರರು ಇದ್ದರು.