ಹರಿಹರಕ್ಕೆ ಸಂಸದ ಸಿದ್ದೇಶ್ವರ್ ಕೊಡುಗೆ ಅಪಾರ – ಗಾಯಿತ್ರಿ ಸಿದ್ದೇಶ್ವರ್
ಸಂಜೆವಾಣಿ ವಾರ್ತೆ
ಹರಿಹರ : ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿಗಿಂತ ಅಕ್ರಮ ಮರಳುಗಾರಿಕೆಗೆ ಹೆಚ್ಚು ಒತ್ತು ಕೊಟ್ಟಿದ್ಧಾರೆ. ಚುನಾವಣೆ ಬಂತು, ಪತ್ನಿ ಅಭ್ಯರ್ಥಿ ಎಂದು ಈಗ ಅಭಿವೃದ್ಧಿ ಜಪ ಮಾಡುತ್ತಿದ್ದಾರೆ. ಅಂತಹವರಿಗೆ ಜನ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ಧೇಶ್ವರ್ ತಿಳಿಸಿದರು.ಹರಿಹರ ತಾಲೂಕಿನ ಸಾರಥಿ, ಚಿಕ್ಕಬಿದರಿ, ಪಾಮೇನಹಳ್ಳಿ, ದೀಟೂರು ಗ್ರಾಮಗಳಲ್ಲಿ ಮತಯಾಚಿಸಿ ಮಾತನಾಡಿದ ಅವರು, ಹರಿಹರ ತಾಲೂಕಿನಲ್ಲಿ ಸಚಿವರ ಅಕ್ರಮ ಮರಗಳುಗಾರಿಕೆ ಬಗ್ಗೆ ನಮ್ಮ ಶಾಸಕರಾದ ಬಿ.ಪಿ.ಹರೀಶ್ ಅವರು ಧ್ವನಿ ಎತ್ತಿದ್ಧಾರೆ. ಆದರೆ, ಸಚಿವರ ಹಿಂಬಾಲಕರು ಶಾಸಕರಿಗೆ ಜೀವ ಬೆದರಿಗೆ ಹಾಕಿದ್ದಾರೆ ಎಂದರೆ ಇನ್ನೂ ಸಾಮಾನ್ಯ ಜನರ ಪರಿಸ್ಥಿತಿ ಏನು ನೀವೇ ಯೋಜನೆ ಮಾಡಿ. ಇಂತಹವರಿಗೆ ಅಧಿಕಾರ ಕೊಟ್ಟರೆ ನಮ್ಮ-ನಿಮ್ಮ ಬದುಕು ದುಸ್ಥರವಾಗತ್ತೆ. ನಿಮಗೆ ಬೇಕಿರುವುದು ಅಭಿವೃದ್ಧಿಯೋ… ಅಕ್ರಮವೋ ನೀವೇ ಯೋಚಿಸಿ ಎಂದರು.ಮಾಜಿ ಶಾಸಕರಾದ ಎಚ್.ಎಸ್.ಶಿವಶಂಕರ್ ಮತ್ತು ಹಾಲಿ ಶಾಸಕ ಬಿ.ಪಿ.ಹರೀಶ್ ಅವರು ಹರಿಹರ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ಧಾರೆ. ಸಂಸದ ಜಿ.ಎಂ.ಸದ್ದೇಶ್ವರ್ ಇಚ್ಛಾಶಕ್ತಿಯಿಂದ ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿ ಹರಿಹರ ನಗರದಲ್ಲಿ 25 ಕೋಟಿ ವೆಚ್ಚದಲ್ಲಿ ಸುಸಜ್ಜಿತ ನೂತನ ರೈಲ್ವೆ ನಿಲ್ದಾಣ, ಫ್ಲಾಟ್ ಫಾರ್ಮ್ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಅಮರಾವತಿ ಬಳಿ 28 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಚಿಕ್ಕಜಾಜೂರಿನಿಂದ ಹರಿಹರದವರೆಗೂ 84 ಕೋಟಿ ವೆಚ್ಚದಲ್ಲಿ  ರೈಲ್ವೆ ಲೈನ್ ವಿದ್ಯುದೀಕರಣ ಮಾಡಲಾಗಿದೆ.  ಕೊಂಡಜ್ಜಿ ಬಳಿ 3 ಕೋಟಿ ವೆಚ್ಚದ ಸೇತುವೆ, ಹರಳಹಳ್ಳಿ ಬಳಿ 2.60 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ  ಸೇತುವೆ ನಿರ್ಮಾಣ ಮಾಡಲಾಗಿದೆ. ತಾಕತ್ ಇದ್ದರೆ ಹರಿಹರ ತಾಲೂಕಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕೊಡುಗೆ ಏನು ತಿಳಿಸಲಿ ಎಂದು ಸವಾಲು ಹಾಕಿದರು.ದೇಶದ ಜನ ಮೂರನೇ ಬಾರಿಗೂ ಮೋದಿ ಅವರೇ ಪ್ರಧಾನಿ ಆಗಬೇಕು ಎಂದು ಬಯಸಿದ್ದಾರೆ. ಲೋಕಸಭಾ ಕ್ಷೇತ್ರದ ಜನ ಕೂಡ ಗಾಯಿತ್ರಿ ಸಿದ್ದೇಶ್ವರ್ ಸಂಸದರಾದರೆ ಜಿಲ್ಲೆ ಅಭಿವೃದ್ಧಿ ಆಗುತ್ತೆ ಅಂತ ನಂಬಿದ್ದಾರೆ. ನೀವು ನನಗೆ ಮತ ಹಾಕಿದರೆ ಅದು ನೇರವಾಗಿ ನರೇಂದ್ರ ಮೋದಿ ಅವರಿಗೆ ಹಾಕಿದಂತೆ. ಈ ಬಾರಿ ಕೇಂದ್ರದಲ್ಲಿ ಮೋದಿ ಜೀ ಮತ್ತೆ ಪ್ರಧಾನಿ ಆಗುವುದು ಶತಸಿದ್ಧ. ದಾವಣಗೆರೆಯಲ್ಲೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದರೆ ಕೇಂದ್ರದಿಂದ ಮತ್ತಷ್ಟು ಯೋಜನೆಗಳನ್ನು ಹರಿಹರಕ್ಕೆ ತರಬಹದು. ಪ್ರತಿಯೊಬ್ಬರೂ ಇನ್ನೂ 12 ದಿನ ವಿರಮಿಸದೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.