ಸಮಗ್ರ ಅಭಿವೃದ್ಧಿಗಾಗಿ ಸ್ಟಾರ್ ಚಂದ್ರು ಬೆಂಬಲಿಸಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.25: ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಜಿಲ್ಲೆಯ ಜನ ಏಪ್ರಿಲ್ 26 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಮತ ನೀಡುವಂತೆ ಕಾಂಗ್ರೆಸ್ ಮುಖಂಡ ವಿಜಯ ರಾಮೇಗೌಡ ಮನವಿ ಮಾಡಿದರು.
ಅವರು ಸ್ವಗ್ರಾಮ ಬೂಕನಕೆರೆ ಸೇರಿದಂತೆ ಬೂಕನಕೆರೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಪಕ್ಷದ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತ ಯಾಚನೆ ಮಾಡಿದರು.
ಬೂಕನಕೆರೆ ಗ್ರಾಮದೇವತೆ ಗೋಗಾಲಮ್ಮನಿಗೆ ಕಾರ್ಯಕರ್ತರೊಂದಿಗೆ ಸೇರಿ ವಿಶೇಷ ಪೂಜೆ ಸಲ್ಲಿಸಿ ಪಕ್ಷದ ಅಭ್ಯರ್ಥಿಯನ್ನು ಜಯಶೀಲರನ್ನಾಗಿಸುವಂತೆ ಪ್ರಾರ್ಥಿಸುವ ಮೂಲಕ ವಿಜಯ ರಾಮೇಗೌಡ ಮನೆ ಮನೆ ಪ್ರಚಾರ ಆರಂಭಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಬಸ್ ಸಂಚಾರ ಮತ್ತು ಯುವ ನಿಧಿಯ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ನೀಡುವ ಮೂಲಕ ಸಮಾಜದ ಸರ್ವಜನರಿಗೂ ನೆರವಿನ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರದ ಜನಪರ ಯೋಜನೆಗಳಿಗೆ ಮತ್ತಷ್ಟು ಶಕ್ತಿ ಬರಲಿದೆ. ರೈತರ ಸಾಲ ಮನ್ನಾ, ಮಹಿಳೆಯರಿಗೆ ವಾರ್ಷಿಕ 01 ಲಕ್ಷ ರೂಪಾಯಿಗಳ ಆರ್ಥಿಕ ನೆರವು, ಮಹಿಳೆಯರಿಗೆ ಸೇ.50 ರಷ್ಟು ಉದ್ಯೋಗ ಮೀಸಲಾತಿ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ದೇಶದ ಸಮಗ್ರ ಅಭಿವೃದ್ದಿಗೆ ಕಾಂಗ್ರೆಸ್ ಶ್ರಮಿಸಲಿದೆ. ಅಧಿಕಾರ ಪಡೆಯುವ ಏಕೈಕ ಆಸೆಯಿಂದ ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕಳೆದ 10 ವರ್ಷಗಳ ತನ್ನ ಆಡಳಿತದಲ್ಲಿ ಅಂಬಾನಿ, ಅದಾನಿಯಂತಹ ಬಂಡವಾಳಶಾಹಿಗಳಿಗೆ ಶಕ್ತಿ ತುಂಬಿದೆಯೇ ಹೊರತು ಬಡವರ ಬದುಕನ್ನು ಹಸನುಗೊಳಿಸುವ ಕೆಲಸ ಮಾಡಿಲ್ಲ. ಅಡುಗೆ ಅನಿಲ, ಅಡುಗೆ ಎಣ್ಣೆ, ಪೆಟ್ರೋಲ್, ಡೀಸಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಬಡವರು ಮತ್ತು ಮದ್ಯಮ ವರ್ಗದವರ ಬದುಕಿಗೆ ಬರೆ ಎಳೆದಿದ್ದೇ ಬಿಜೆಪಿ ಸರ್ಕಾರದ ಸಾಧನೆ ಎಂದ ವಿಜಯರಾಮೇಗೌಡ ಸ್ಟಾರ್ ಚಂದ್ರು ಹಣವಂತರಾಗಿದ್ದರೂ ಉತ್ತಮ ಸಂಸ್ಕಾರವಂತ ನಡವಳಿಕೆಯ ವ್ಯಕ್ತಿ. ಜಿಲ್ಲೆಯ ಜನ ಸೇವೆ ಮಾಡುವ ಏಕೈಕ ಉದ್ದೇಶದಿಂದ ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಕ್ಷೇತ್ರದ ಮತದಾರರು ಸ್ಟಾರ್ ಚಂದ್ರು ಅವರಿಗೆ ಮತಹಾಕುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೈ ಬಲಪಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಿ.ಟಿ.ವೆಂಕಟೇಶ್, ಕೃ.ಪ.ಸ.ಸ.ನಿರ್ದೇಶಕರಾದ ಮಹೇಶ್, ಪ್ರಸಾದ್, ಮಲ್ಲಿಕಾರ್ಜುನ್, ಸುರೇಶ್, ಗ್ರಾ.ಪಂ.ಸದಸ್ಯರಾದ ಗಿರೀಶ್, ಅರುಣೇಶ್, ರವಿರಾಮೇಗೌಡ, ಲೋಹಿತ್, ತಮ್ಮಯ್ಯ, ರಾಮು, ಗಿರಿ, ಕೃಷ್ಣ, ವಿಜಯ್ ರಾಮೇಗೌಡರ ಆಪ್ತ ಸಹಾಯಕ ಬಸವರಾಜು ಸೇರಿದಂತೆ ನೂರಾರು ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.