ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗಬೇಕಾದರೆ ನನ್ನನ್ನು ಗೆಲ್ಲಿಸಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೨೫: ಗ್ರಾಮೀಣ ಭಾಗದ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಉದ್ಯೋಗ ದೊರೆಯುತ್ತಿಲ್ಲ. ಹೊಸ ವ್ಯವಸ್ಥೆ ಸೃಷ್ಟಿಸಲು ರಾಜಕೀಯದಲ್ಲಿ ಅಧಿಕಾರ ಬೇಕು. ಈ ಬಾರಿ ಸಿಲಿಂಡರ್ ಗುರುತಿಗೆ ಮತ ನೀಡಿ ನನ್ನನ್ನು ಗೆಲ್ಲಿಸಿ. ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ದಿಕ್ಕೇ ಬದಲಾಗುತ್ತದೆ ಎಂದು ಲೋಕಸಭೆ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಕರೆ ನೀಡಿದರು.ಜಗಳೂರು ತಾಲೂಕಿನ ಹಾಲೇಕಲ್ಲು ಹಾಗೂ ಬಿಳಚೋಡು ಗ್ರಾಮದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ವಿನಯ್ ಕುಮಾರ್ ಆಗಮಿಸುತ್ತಿದ್ದಂತೆ ಗ್ರಾಮದ ನೂರಾರು ಮಂದಿ ಅದ್ಧೂರಿಯಾಗಿ ಸ್ವಾಗತಿಸಿದರು.ಹಾಲೇಕಲ್ಲು ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮುಂಭಾಗ ನೂರಾರು ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಅವರು, ಗುಲಾಮರಾಗಿ, ಹೇಳಿದ್ದನ್ನು ಕೇಳಿಕೊಂಡು ಬದುಕುವ ಸಂಸ್ಕೃತಿ ಇನ್ನು 50 ವರ್ಷವಲ್ಲ, ನೂರು ವರ್ಷ ಆದರೂ ಬದಲಾಗಲ್ಲ. ಈ ಬಾರಿ ಅವಕಾಶ ಸಿಕ್ಕಿದೆ. ಅದನ್ನು ಬಳಸಿಕೊಳ್ಳೋಣ. ಶಿಕ್ಷಣದ ಸಹಾಯದಿಂದ  ಜ್ಞಾನ ಸಂಪಾದನೆ ಮಾಡಿದೆ. ಸೇವೆಗೊಂದು ಅವಕಾಶ ಕೊಡಿ. ಜಗಳೂರಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕುಡಿಯುವ ನೀರಿನ ಸಮಸ್ಯೆ, ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಕುಡಿಯುವ ನೀರು, ಶಿಕ್ಷಣ, ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.ಕೈಗಾರಿಕೆಗಳ ಸ್ಥಾಪನೆ, ಮೆಕ್ಕೆಜೋಳ ಹೆಚ್ಚಾಗಿ ಬೆಳೆಯಲಾಗುತ್ತದೆ. ಕೋಲ್ಡ್ ಸ್ಟೋರೇಜ್, ಉದ್ಯೋಗ ಸೃಷ್ಟಿಸುವಂಥ ಕೈಗಾರಿಕೆಗಳನ್ನು ತರುತ್ತೇನೆ. ಹಳ್ಳಿ ಹಳ್ಳಿಗಳಲ್ಲೂ ಜನರು ಪ್ರೀತಿ ತೋರುತ್ತಿದ್ದಾರೆ. ನಿಮ್ಮ ಕೆಲಸ ಮಾಡಲು ನಾನು ಬಂದಿರುವುದು. ಯಾವುದೇ ಸ್ವಾರ್ಥ ಸಾಧನೆಗಲ್ಲ ಎಂದು ತಿಳಿಸಿದರು.ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಸಿಗಬೇಕಿತ್ತು. ಸಿಎಂ ಸಿದ್ದರಾಮಯ್ಯ ಅವರು ಪ್ರೋತ್ಸಾಹ ಕೊಟ್ಟರು, ನನ್ನ ಪರವಾಗಿ ಮಾತನಾಡಿದರು. ಆದರೂ ಕೂಡ ಕಾಣದ ಕೈಗಳಿಂದ ಟಿಕೆಟ್ ಕೈತಪ್ಪಿತು. ಸಿದ್ದರಾಮಯ್ಯ ಹಾಗೂ ಕಾಗಿನೆಲೆ ಶ್ರೀಗಳು ಸೇರಿದಂತೆ ಅನೇಕ ಮುಖಂಡರು ಸ್ಪರ್ಧೆ ಬೇಡ, ಮುಂದೆ ಅವಕಾಶ ಇದೆ ಎಂದು ಹೇಳಿದ್ದರೂ ಜನರು ಬಯಸಿದ ಕಾರಣಕ್ಕೆ ಮನ್ನಣೆ ಕೊಟ್ಟು ಧೈರ್ಯದಿಂ ಸ್ಪರ್ಧಿಸಿ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.ನಾಯಕರು ಬೇಕಾ? ಜನರು ಬೇಕಾ ಎಂಬ ಪ್ರಶ್ನೆ ಬಂತು. ಆಗ ಜನರನ್ನು ಆಯ್ಕೆ ಮಾಡಿಕೊಂಡೆ. ನಾಯಕ ಆದರೆ ಬೆಳೆಸುವ ಸಮಯದಲ್ಲಿ ಅವರಿಗೂ ತೊಂದರೆ ಆಗಬಹುದು. ಜನರು ಮನಸ್ಸು ಮಾಡಿದರೆ ನಾಯಕನನ್ನು ಹುಟ್ಟು ಹಾಕುತ್ತಾರೆ.ಮೇ.7ಕ್ಕೆ ಮತದಾನ ದಿನ. ಅಂದು ವೈಯಕ್ತಿಕ ಜವಾಬ್ದಾರಿಯಾಗಿ ತೆಗೆದುಕೊಂಡು ಸ್ವಾಭಿಮಾನಿಗಳಾಗಿ 2ನೇ ಮತಯಂತ್ರ ನಂಬರ್ 28, ಜಿ. ಬಿ. ವಿನಯ್ ಕುಮಾರ್ ಸಿಲಿಂಡರ್ ಗುರುತಿಗೆ ಮತ ನೀಡಿ. ಹೆಚ್ಚು ಮತಗಳು ಬಂದು ನಾನು ಗೆದ್ದರೆ ಅಹಿಂದ, ಪ್ರಜಾಪ್ರಭುತ್ವದ ಗೆಲುವು ಆಗುತ್ತದೆ ಎಂದು ತಿಳಿಸಿದರು. ಪ್ರತಿಯೊಬ್ಬರ ಮನೆಯಲ್ಲೂ ಸಿಲಿಂಡರ್ ಇದೆ. ಈ ಚಿಹ್ನೆಗೆ ಮತ ನೀಡಿ ಗೆಲ್ಲಿಸಿ ಎಂದು
ಮನವಿ ಮಾಡಿದರು.