ಸತಿಪತಿಯ ಹೊಂದಾಣಿಕೆ ಬದುಕು ಈಶ್ವರನಿಗೆ ಇಷ್ಟ, ಅಂತೆಯೇ ಬದುಕಿ
ಸಂಜೆವಾಣಿ ವಾರ್ತೆ
ಶಿವಮೊಗ್ಗ. ಏ.೨೫; ಸತಿ ಪತಿ ಒಂದಾದ ಬದುಕು ಈಶ್ವರನಿಗೆ ಅತ್ಯಂತ ಇಷ್ಟವಾದುದು. ಧರ್ಮ, ಅರ್ಥ, ಕಾಮದ ಮೂರು ಅಂಶಗಳಲ್ಲಿ ಸತಿಪತಿ ಪರಸ್ಪರ ಹೊಂದಾಣಿಕೆ ಅತ್ಯಗತ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ತಿಳಿಸಿದರು. 26ನೇ ವರ್ಷದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಸಮಾರಂಭ ನಿಮಿತ್ತ ನಡೆದ ಉಚಿತ ಸಾಮೂಹಿಕ  ವಿವಾಹ ಹಾಗೂ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಹಿರಿಯರನ್ನು ಗೌರವಿಸುವ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಡಾ. ರಾಜಕುಮಾರ್ ಅವರ ಉದಾಹರಣೆಯೊಂದರ ಮೂಲಕ ಪತ್ನಿ ಗಂಡನಿಗೆ ಹೇಗೆ ಮುಖ್ಯವಾಗುತ್ತಾಳೆ. ಬದುಕು ಹೇಗೆ ಸುಂದರವಾಗುತ್ತದೆ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದ ಅವರು ಹಿಂದೆ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಇದ್ದಾಗ ನಮ್ಮ ಅಂದರಮಕ್ಕಳ ಶಾಲೆಗೆ ಬಂದಿದ್ದ ಡಾ. ರಾಜಕುಮಾರ್ ಅವರು ಮಾತನಾಡಿದಾಗ ಶ್ರೀಗಳು ಮಕ್ಕಳಿಗಾಗಿ ಹಾಡೊಂದನ್ನು ಹಾಡಲು ತಿಳಿಸಿದರು. ಆಗ ಅಲ್ಲಿಯೇ ಪಕ್ಕದಲ್ಲಿದ್ದ ಪಾರ್ವತಮ್ಮ ರಾಜಕುಮಾರ್ ಅವರಿಗೆ ರಾಜಕುಮಾರ್ ಅವರು ಹಾಡು ಕೇಳುತ್ತಾರೆ ಹಾಡಲೇ ಎಂದು ಪ್ರಶ್ನಿಸಿದರು. ಇದು ತಗ್ಗಿ ಬಗ್ಗಿ ನಡೆಯುವುದಲ್ಲ. ಪತ್ನಿಯ ಬಗ್ಗೆ ಅವರಿಗಿದ್ದ ಪ್ರೀತಿ ವಿಶ್ವಾಸ ಎಂದು ಹೇಳಿದರು. ಧರ್ಮದ ವಿಚಾರದಲ್ಲಿ ಸತಿಪತಿ ಜೊತೆಯಾಗಿರಬೇಕು. ಹಾಗೆಯೇ ಹಣಕಾಸಿನ ವಿಷಯದಲ್ಲಿ ಎಲ್ಲಾ ವ್ಯವಹಾರಗಳು ಗಂಡ ಹೆಂಡತಿ ಮಧ್ಯೆ ಗುಟ್ಟಾಗಿರಬಾರದು. ಮನೆಯ ಬೇಕು, ಬೇಡ ಎಂಬುದರ ಬಗ್ಗೆ ಇಬ್ಬರೂ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಬೇಕು. ಎಂದು ಧರ್ಮೇಚ, ಅರ್ಥೇಚ, ಕಾಮೇಚ ನಾತಿ ಚರಾಮಿ ಎಂಬ ಶ್ಲೋಕದ ವಿವರಣೆ ನೀಡಿದರು.