ಶಾಂತಿಸಾಗರ ಅಭಿವೃದ್ಧಿಗೆ ಕ್ರಮ : ಡಾ. ಪ್ರಭಾ ಮಲ್ಲಿಕಾರ್ಜುನ್

ಸಂಜೆವಾಣಿ ವಾರ್ತೆ
ಚನ್ನಗಿರಿ.ಏ.೨೫ : ದಾವಣಗೆರೆ ಜಿಲ್ಲೆಯಲ್ಲಿ ಅತಿಹೆಚ್ಚು ಅಡಿಕೆ ಬೆಳೆ ಪ್ರದೇಶ ಚನ್ನಗಿರಿ ತಾಲ್ಲೂಕು ಅಡಿಕೆ ನಾಡು ಎಂದು ಪ್ರಸಿದ್ದಿ ಆಗಿದ್ದು, ಇಂತಹ ಪ್ರದೇಶಕ್ಕೆ ಕಳಂಕ ಬರುವಂತೆ ಕೇಂದ್ರ ಸರ್ಕಾರ ಮತ್ತು ಈ ಜಿಲ್ಲೆಯ ಲೋಕಸಭಾ ಪ್ರತಿನಿಧಿ ನಡೆದುಕೊಂಡಿದ್ದಾರೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್  ಆರೋಪಿಸಿದರು.ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚನ್ನಗಿರಿ ತಾಲ್ಲೂಕಿನ ಕೆಂಪನಹಳ್ಳಿ ಗ್ರಾಮದಿಂದ ಇಂದು ಪ್ರಚಾರ ಕಾರ್ಯ ಆರಂಭಿಸಿದ ಪ್ರಭಾ ಮಲ್ಲಿಕಾರ್ಜುನ್ ಅವರು ಕೊಗಲೂರು, ದೊಡ್ಡ ಮಲ್ಲಾಪುರ, ಕರೇಕಟ್ಟೆ, ಸೋಮಲಾಪುರ, ಕಾಕನೂರು, ನುಗ್ಗಿಹಳ್ಳಿ, ಚಿಕ್ಕಗಂಗೂರು, ಕೊರಟಿಕೆರೆ, ಹೆಬ್ಬಳಗೆರೆ, ಹೊದಿಗೆರೆ, ಗರಗ, ದೇವರಹಳ್ಳಿ, ಕಗತೂರು, ಬುಳಸಾಗರ, ಇಟ್ಟಿಗೆ, ಲಿಂಗದಹಳ್ಳಿ, ನಲ್ಲೂರು ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.ಚನ್ನಗಿರಿ ತಾಲ್ಲೂಕಿನಾದ್ಯಂತ ಅಡಿಕೆ ಬೆಳೆ ಬಂಪರ್ ಆಗಿ ಬೆಳೆಯುತ್ತಿದ್ದರೂ ಸಹ ಕೇಂದ್ರ ಸರ್ಕಾರ ಅಡಿಕೆಯನ್ನು ಬೇರೆ ರಾಷ್ಟçಗಳಿಂದ ಆಮದು ಮಾಡಿಕೊಂಡಿತು. ಇದಕ್ಕೆ ಸಂಸದರು ಕನಿಷ್ಠ ಪಕ್ಷ ವಿರೋಧ ಸಹ ವ್ಯಕ್ತಪಡಿಸಲಿಲ್ಲ. ಇಂತಹ ಸಂಸದರು ನಿಮಗೆ ಬೇಕಾ ಎಂದು ಪ್ರಶ್ನಿಸಿದರು.ಈ ಬಾರಿ ದೇಶದಲ್ಲಿ ಬದಲಾವಣೆ ಖಂಡಿತ ಆಗಲಿದ್ದು, ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಅಧಿಕಾರ ಹಿಡಿಯಲಿದ್ದು, ನಮ್ಮ ಸರ್ಕಾರದಲ್ಲಿ ಅಡಿಕೆಗೆ ಸ್ಥಿರ ಬೆಲೆ ಕೊಡಿಸುವುದು, ಅಡಿಕೆ ಸಂಸ್ಕರಣಾ ಘಟಕ ಆರಂಭಿಸುವುದು ಸೇರಿದಂತೆ ಅಡಿಕೆಗೆ ಪೂರಕವಾದ ವಾತಾವರಣ ನಿರ್ಮಿಸುತ್ತೇವೆ ಎಂದರು.ಈ ಭಾಗದ ಶಾಸಕರಾದ ಶಿವಗಂಗಾ ಬಸವರಾಜ್ ಅವರ ಸಹಕಾರದಿಂದ ಚನ್ನಗಿರಿ ಸುತ್ತಮುತ್ತ ರೈತರಿಗೆ ಸಮರ್ಪಕವಾದ ರಸ್ತೆಗಳ ನಿರ್ಮಾಣ ಹಾಗೂ ಏಷ್ಯಾದ ಅತಿದೊಡ್ಡ ಶಾಂತಿ ಸಾಗರವನ್ನು ಸಂಪೂರ್ಣ ಅಭಿವೃದ್ಧಿಗೊಳಿಸಲಾಗುವುದು ಎಂದರು.