ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಬೆಂಬಲಿಸಲು ಕರೆ


ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೨೫: ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಜಿ.ಬಿ.ವಿನಯ್ ಕುಮಾರ್ ಸ್ಪರ್ಧೆ ಮಾಡಿದ್ದು, ಅವರ ಗುರುತಾದ ಸಿಲಿಂಡರ್ ಚಿನ್ನೆಗೆ ದಾವಣಗೆರೆ ಜಿಲ್ಲೆಯ ಮತದಾರರು ಮತ ನೀಡಿ ಗೆಲುವಿಗೆ ಸಹಕಾರ ನೀಡಬೇಕೆಂದು ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನಪ್ಪ ಮನವಿ ಮಾಡಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿದ್ಯಾವಂತರೂ, ವಿಚಾರವಂತರೂ ಆಗಿರುವ ವಿನಯ್ ಕುಮಾರ್, ಐಎಎಸ್‌, ಐಪಿಎಸ್ ಕೋಚಿಂಗ್ ಕೇಂದ್ರಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ತೆರೆದು ದೇಶದ ಅಭಿವೃದ್ಧಿಗೆ, ಚಿಂತನೆಗೆ ಮುಂದಾಗಿದ್ದಾರೆ. ಕಾರಣ ಜಿಲ್ಲೆಯ ಜನತೆ ಅವರನ್ನು ಬಹುಮತದಿಂದ ಆರಿಸಿ ಲೋಕಸಭೆಗೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿದರು.ದಾವಣಗೆರೆ ಜಿಲ್ಲೆಯಲ್ಲಿ ಕೇವಲ 2 ಮನೆತನಗಳಾದ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ಪ್ರಭಾ ಮಲ್ಲಿಕಾರ್ಜುನ, ಈಗ ಅವರ‌ ಮೊಮ್ಮಗನನ್ನು ರಾಜಕೀಯ ಕ್ಷೇತ್ರಕ್ಕೆ ಪರಿಚಯ ಮಾಡಿ ಕೊಡುತ್ತಿದ್ದಾರೆ. ಅದೇರೀತಿ ಬಿಜೆಪಿಯಲ್ಲಿ ಜಿ.ಮಲ್ಲಿಕಾರ್ಜುನಪ್ಪ, ಜಿ.ಎಂ.ಸಿದ್ದೇಶ್ವರ ಇದೀಗ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಲೋಕಸಭಾ ಕ್ಷೇತ್ರಕ್ಕೆ ಬಂದಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಸಾಯುವವರೆಗೂ ಈ ಎರಡೂ ಮನೆತನಗಳೇ ಇರಬೇಕಾ ಎಂದು ಪ್ರಶ್ನಿಸಿದರು.ಈ ರೀತಿ ವಂಶಾವಳಿಯ ಆಧಾರದಲ್ಲಿ ಮತದಾನ ಮಾಡಿದರೆ  ಪ್ರಜಾಪ್ರಭುತ್ವದ ಪರಿಕಲ್ಪನೆಗೆ ಧಕ್ಕೆ ಬರಲಿದೆ. ಎಲ್ಲಾ ಸಮುದಾಯದವರಿಂದ ಮತ ಪಡೆದು ಒಂದು ಸಮುದಾಯದ ಪರವಾಗಿ ಹೇಳಿಕೆ ನೀಡುವ ಶಾಮನೂರು ಶಿವಶಂಕರಪ್ಪ ಅವರು ಜಾತಿಯ ಪರವಾಗಿ ಮಾತನಾಡಿದ್ದಾರೆ. ಇದು ಜಾತಿಯ ಸೂಚಕ. ಕಾರಣ ಅವರನ್ನು ಸೋಲಿಸಲು ಜಿಲ್ಲೆಯ ಜನತೆ ಮುಂದಾಗಬೇಕೆಂದು ಕರೆ ನೀಡಿದರು.ಅದೇರೀತಿ ಬಿಜೆಪಿ ಪಕ್ಷ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬದಲಾವಣೆ, ಅಧಿಕಾರಿಗಳ ಸ್ವತಂತ್ರ ಮೊಟಕುಗೊಳಿಸಿ ದೇಶದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಯಾವುದೇ ಸೂಕ್ತ ನಿರ್ಣಯಕ್ಕೆ ಬಾರದೇ ಖಾಸಗಿ ಕಂಪನಿಗಳ ಪರವಾಗಿ ನಿಂತಿರುವ ಕಾರಣ ಬಿಜೆಪಿ ಪಕ್ಷವನ್ನು ‌ಸೋಲಿಸಬೇಕು. ಕಾರಣ ಜಿಲ್ಲೆಯ ಜನರು ಈ ಎರಡೂ ವಂಶಗಳನ್ನು ಚುನಾವಣೆಯಲ್ಲಿ ಸೋಲಿಸಿ, ಜಿ.ಬಿ.ವಿನಯ್ ಕುಮಾರ್ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ಸುದ್ದಿಗೋಷ್ಟಿಯಲ್ಲಿ ಬೇಲಿಮಲ್ಲೂರು ಎಂ.ನಾಗಪ್ಪ, ಹೊನ್ನಾಳಿಯ ಸಷ್ಣಸಿದ್ದಪ್ಪ, ಡಾ.ಕರಿಬಸಯ್ಯ ಮಠದ ಒಡೆಯರ, ಹನುಮಂತಪ್ಪ ಹದಡಿ ಇತರರು ಇದ್ದರು.