ರಾಷ್ಟ್ರದ ಅಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಪಾತ್ರ ಅನನ್ಯ
ಕಲಬುರಗಿ:ಏ.24: ಅಧಿಕಾರ ವಿಕೇಂದ್ರಕರಣದ ಪ್ರಮುಖ ಧ್ಯೇಯದೊಂದಿಗೆ ಉದಯಿಸಿದ ಪಂಚಾಯತ್ ರಾಜ್ ಪದ್ಧತಿಯು ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಬಹುದೊಡ್ಡ ಜವಾಬ್ದಾರಿಯನ್ನು ಮಾಡುವ ಮೂಲಕ ರಾಷ್ಟ್ರದ ಅಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯು ಅನನ್ಯವಾದ ಕೊಡುಗೆಯನ್ನು ನೀಡುತ್ತಿದೆ ಎಂದು ಬೋಧನ ಗ್ರಾಪಂ ಪಿಡಿಓ ರಾಚಣ್ಣಗೌಡ ಎಂ.ಪಾಟೀಲ ಅಭಿಮತಪಟ್ಟರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ರಾಷ್ಟ್ರೀಯ ಪಂಚಾಯತ ರಾಜ್ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರದ ಯೋಜನೆಗಳು, ನಿರ್ದೇಶನ, ಸಲಹೆ-ಸೂಚನೆಗಳು ಜಿಪಂ ಮತ್ತು ತಾಪಂ ಮೂಲಕ ಗ್ರಾಮ ಪಂಚಾಯತಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಕುಡಿಯುವ ನೀರು, ನೈರ್ಮಲ್ಯ ವ್ಯವಸ್ಥೆ, ಉದ್ಯೋಗಳನ್ನು ನೀಡುವುದು, ಬೀದಿ ದೀಪದ ವ್ಯವಸ್ಥೆ, ಕೃಷಿ ಯೋಜನೆಗಳ ಅನುಷ್ಠಾನ, ಸಾರ್ವಜನಿಕ ಗ್ರಂಥಾಲಯಗಳ ನಿರ್ವಹಣೆ, ಗ್ರಾಮೀಣ ಸಂಪರ್ಕ ರಸ್ತೆಗಳ ನಿರ್ಮಾಣ, ಸಾರ್ವಜನಿಕರಿಗೆ ಉಪಯುಕ್ತ ಮುಂತಾದ ಸೇವೆಗಳನ್ನು ನೀಡುವ ಮೂಲಕ ಗ್ರಾಮೀಣ ಪ್ರದೇಶದ ಜನರ ಸುಗಮ ಜೀವನಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ರಾಜ್ಯ ಅಥವಾ ಕೇಂದ್ರ ಸರ್ಕಾರದಲ್ಲಿ ಮಾತ್ರ ಅಧಿಕಾರವಿದ್ದರೆ ದೇಶದ ಕಡೆಯ ಹಳ್ಳಿಯವರೆಗೆ ಯೋಜನೆಗಳು ತಲುಪಲು ಅಸಾಧ್ಯ ಮತ್ತು ಸ್ಥಳೀಯ ಸರ್ಕಾರ ಅವಶ್ಯಕತೆಯನ್ನು ಮನಗಂಡು 1993ರಲ್ಲಿ ಪಂಚಾಯತ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನಕೂಲವಾಗಿದೆ. ನಾಗರಿಕರು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಡಿಜಿಟಲಿಕರಣದಿಂದಾಗಿ ಪಾರದರ್ಶಕ ಮತ್ತು ಕಾಲಮಿತಿಯಲ್ಲಿ ಯೋಜನೆ ಹಾಗೂ ಸೇವೆಗಳು ಸಾರ್ವಜನಿಕರಿಗೆ ತಲುಪುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ತರಬೇತಿ ಕೇಂದ್ರದ ಶಿಕ್ಷಕರಾದ ನಿಲೋಫರ್ ಶೇಖ್, ಪೂಜಾ ಜಮಾದಾರ, ಪ್ರಮುಖರಾದ ಸತೀಶ್, ಬೀರಣ್ಣ, ಅನೀಲಕುಮಾರ, ಶಿವರಾಜ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.