ಶ್ರದ್ಧಾಭಕ್ತಿಯಿಂದ ಹನುಮ ಜಯಂತಿ ಆಚರಣೆ
ಅಥಣಿ :ಏ.24: ತಾಲ್ಲೂಕಿನಾದ್ಯಂತ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಹನುಮ ಜಯಂತಿ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆ, ಮಹಾ ಪ್ರಸಾದ ವ್ಯವಸ್ಥೆ ಹಮ್ಮಿಕೊಳ್ಳಲಾಗಿತ್ತು.
ಅಥಣಿ ಪಟ್ಟಣದ ಬುಧವಾರ ಪೇಠ ಹನುಮಾನ ಮಂದಿರದಲ್ಲಿ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ವಿಶೇಷವಾಗಿ ಆಚರಿಸಲಾಯಿತು.
ಪಟ್ಟಣದ ಶಂಕರನಗರದಲ್ಲಿರುವ ವೀರಾಂಜನೇಯ ಹಾಗೂ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಭಿಷೇಕ, ಪ್ರಸಾದ್ ವ್ಯವಸ್ಥೆ ಮಾಡಲಾಗಿತ್ತು.
ತಾಲೂಕಿನ ಕೃಷ್ಣಾ ನದಿ ತೀರದ ಅವರಖೋಡ ಗ್ರಾಮದಲ್ಲಿ ಸ್ವಯಂಭೂತ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತು ಮಹಾಪ್ರಸಾದ ಹಮ್ಮಿಕೊಳ್ಳಲಾಗಿತ್ತು. ಅಥಣಿ ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಸ್ಥರು ಪಾದಯಾತ್ರೆಯ ಮೂಲಕ ದೇವಸ್ಥಾನಕ್ಕೆ ಆಗಮಿಸಿ ಸರದಿ ಸೋಲಿನಲ್ಲಿ ನಿಂತು ಸ್ವಯಂ ಭೂತ ಆಂಜನೇಯ ಮೂರ್ತಿ ದರ್ಶನ ಪಡೆದು ಮಹಾಪ್ರಸಾದ ಸ್ವೀಕರಿಸಿದರು. ಹನುಮ ಜಯಂತಿ ಅಂಗವಾಗಿ ಹನುಮಾನ ಮೂರ್ತಿ ಮತ್ತು ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಹನುಮ ಜಯಂತಿಯ ಪ್ರಯುಕ್ತ ಗ್ರಾಮದಲ್ಲಿ ಜಾತ್ರೆಯ ವಾತಾವರಣ ಮೂಡಿದ್ದು, ಸಾವಿರಾರು ಭಕ್ತರು ವಿವಿಧ ತಾಲ್ಲೂಕು ಜಿಲ್ಲೆಗಳಿಂದ ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು. ತಿಂಡಿ ತಿನಿಸು, ಆಟಿಕೆ, ಮುಂತಾದ ವಿವಿಧ ರೀತಿಯ ಅಂಗಡಿ ತರೆಯಲಾಗಿತ್ತು. ಆಗಮಿಸಿದ ಭಕ್ತರಿಗೆಲ್ಲಾ ದೇವಾಲಯದ ಸಮಿತಿ ವತಿಯಿಂದ ಮಹಾ ಪ್ರಸಾದದ ವ್ಯವಸ್ಥೆ ಮಾಡಿದ್ದರು.