ಹನುಮಂತನಲ್ಲಿ ಸೇವಾ ಭಾವವಿತ್ತು:ಕೈಲಾಸಪೇಠಶ್ರೀ
ತಾಳಿಕೋಟೆ:ಏ.24: ಸೇವಾ ಭಾವ ಭಕ್ತಿ ಭಾವ ಯಾವ ಕಾಲಕ್ಕೂ ತನ್ನ ಗುಣವನ್ನು ಬಿಟ್ಟುಕೊಡಲಿಲ್ಲಾ ಹನುಮಂತನು ಸೇವಾ ಭಾವವನ್ನು ಬಿಟ್ಟುಕೊಡದೇ ಶ್ರೀರಾಮ ಚಂದ್ರನ ಸೇವೆಯನ್ನು ಮಾಡುತ್ತಾ ಸಾಗಿದ್ದರಿಂದ ಅವನಲ್ಲಿದ್ದ ಭಕ್ತಿ ಎಂಬುದು ಎಲ್ಲದರಲ್ಲಿಯೂ ಜಯ ಸಾದಿಸುತ್ತಿತ್ತೆಂದು ಕೈಲಾಸ ಪೇಠೆಯ ಶ್ರೀ ಬಸವಪ್ರಭು ದೇವರು ನುಡಿದರು.
ಮಂಗಳವಾರರಂದು ಸ್ಥಳೀಯ ಆಶ್ರಯ ನಗರ ಬಡಾವಣೆಯಲ್ಲಿಯ ಶ್ರೀ ಮಾರುತೇಶ್ವರ 15 ವರ್ಷದ ಜಯಂತ್ಯೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ಕುರಿತು ಏರ್ಪಡಿಸಲಾದ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಶ್ರೀಗಳು ಹನುಮಂತನಿಗೆ ಆಂಜನೆಯ ಪವನಪುತ್ರನೆಂಬ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ ಆತನು ಶ್ರೀರಾಮಚಂದ್ರನ ಸೇವೆ ಮಾಡಿದ್ದಲ್ಲದೇ ತಪಸ್ಸು ನಿಷ್ಠೆಯಿಂದ ಸೇವೆ ಮಾಡುತ್ತಾ ಸಾಗಿದ್ದ ಅವನ ಕೀರ್ತಿ ಅಜರಾಮರವಾಗಿ ಉಳಿದಿದೆ ಎಂದರು. ಸೀತಾ ದೇವಿಯನ್ನು ಕರೆಯಲು ಲಂಕಾಕ್ಕೆ ಹೋಗಲು ಸಮುದ್ರಕ್ಕೆ ಸೇತುವೆ ನಿರ್ಮಾಣಕ್ಕಾಗಿ ಹನುಮಂತ ಇಡೀ ವಾನರ ಸೇನೆಯನ್ನು ತೆಗೆದುಕೊಂಡು ಸೇತುವೆ ನಿರ್ಮಾಣಕ್ಕಾಗಿ ಮುಂದಾದಾಗ ಆತ ಪ್ರತಿಯೊಂದು ಕಲ್ಲಿನ ಮೇಲೆ ಶ್ರೀರಾಮ ಎಂದು ಬರೆದು ಆ ಕಲ್ಲನ್ನು ಒಗೆದಾಗ ಅದು ತೇಲುತ್ತಾ ಸಾಗಿತ್ತು ಇದನ್ನು ನೋಡಿದ ಶ್ರೀರಾಮ ಚಂದ್ರನು ತಾನು ಕೂಡಾ ಶ್ರೀರಾಮ ಎಂದು ಬರೆದು ಕಲ್ಲನ್ನು ಒಗೆದು ನೋಡಿದ ಅದು ತೇಲದೇ ಮುಳುಗಿ ಹೋಯಿತು ಯಾಕೆಂದರೆ ನಾನು ಅನ್ನುವದನ್ನು ಬಿಟ್ಟು ಬಿಡಲಾರದ್ದೇ ಕಾರಣವಾಗಿತ್ತೆಂದರು. ನಾವು ಅನ್ನುವದನ್ನು ಬಿಟ್ಟು ಎಲ್ಲವೂ ನಿಂದೆ ಎಂದು ಆ ದೇವರ ಮೋರೆ ಹೋದರೆ ಎಲ್ಲವು ಒಳ್ಳೆಯದಾದೀತೆಂದು ಹೇಳಿದ ಶ್ರೀಗಳು ಇದು ಆಶ್ರಯ ನಗರ ಎನ್ನುವದಕ್ಕಿಂತ ಇಲ್ಲಿಯ ಕಾರ್ಯ ಚಟುವಟಿಕೆಗಳನ್ನು ನೋಡಿದರೆ ಆಜಂನಾದ್ರಿಯ ನಗರವೆಂದು ಕರೆಯುತ್ತೇನೆಂದು ಆಶ್ರಯ ನಗರ ಬಡಾವಣೆಯ ಜನರ ಭಕ್ತಿಭಾವ ಕುರಿತು ಗುಣಗಾನ ಮಾಡಿದರು.
ಇನ್ನೋರ್ವ ಸಾನಿದ್ಯ ವಹಿಸಿದ ಶ್ರೀ ಶಿವಭವಾನಿ ಮಂದಿರದ ಅರ್ಚಕರಾದ ವೇ.ಸಂತೋಷಬಟ್ ಜೋಶಿ ಅವರು ಮಾತನಾಡಿ ಹನುಮ ಜಯಂತಿಯ ದಿನದಂದು ಆಶ್ರಯ ಬಡಾವಣೆಯಲ್ಲಿ ಈ ಹಿಂದಿನಿಂದಲೂ ಎಲ್ಲ ನಮೂನೆಯ ಕಾರ್ಯಕ್ರಮಗಳು ನಡೆಯುತ್ತಾ ಸಾಗಿವೆ ಕಾರಣ ಇಲ್ಲಿಯ ಜನತೆಯ ಪರೋಪಕಾರದ ಗುಣಗಳೇ ಈ ಕಾರ್ಯ ಮಾಡುತ್ತಾ ಸಾಗಿವೆ ಎಂದರು. ನ್ಯಾಯ ಭಕ್ತಿ ಎಂಬುದನ್ನು ಅಳವಡಿಸಿಕೊಳ್ಳಬೇಕು ದಾನ ಧರ್ಮ ಪರೋಪಕಾರ ಎನ್ನುವಂತಹ ಗುಣಗಳನ್ನು ಅಳವಡಿಸಿಕೊಳ್ಳಬೇಕು ಸುಃಖಬರಲಿ ಕಷ್ಟ ಬರಲಿ ಹನುಮಂತನ ನಾಮ ಸ್ಮರಣೆ ಎಂಬುದನ್ನು ಬಿಡಬಾರದು ಸನಾತನ ಧರ್ಮ, ಆದ್ಯಾತ್ಮ ಧರ್ಮ, ಈ ದೇಶದ ಎರಡೂ ಮಹಾ ಶಕ್ತಿಗಳಾಗಿವೆ ಎಂದು ರಾಮಾಯಣ ಕಾಲದಲ್ಲಿ ಹನುಮಂತನು ಮಾಡಿದ ಕಾರ್ಯಗಳ ಕುರಿತು ವಿವರಿಸಿದರಲ್ಲದೇ ನಾನು ಎನ್ನುವದನ್ನು ಬಿಟ್ಟು ಸೇವೆಗೆ ಮುಂದಾದರೆ ಬೇಕಾದುದ್ದನ್ನು ಪಡೆಯಬಹುದಾಗಿದೆ ಎಂದರು.
ಇನ್ನೋರ್ವ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಕರ್ನಾಟಕ ಕಿಸ್ಕಿಂದೆಯ ಆಂಜನಾದ್ರಿಯ ಬೆಟ್ಟದಲ್ಲಿ ಶ್ರೀ ಹನುಮಂತನು ಜನ್ಮ ತಾಳಿದ್ದು ಆತನ ತಂದೆ ವಾನರ ರಾಜಕೇಸರಿ ಮತ್ತು ತಾಯಿ ಆಂಜನಾದೇವಿಯವರ ಉದರದಲ್ಲಿ ಜನಿಸಿದ ಈ ಆಂಜನೆಯನ ಈ ಬೆಟ್ಟದಲ್ಲಿಯ ಅಭಿವೃದ್ದಿಗಾಗಿ ಈ ಹಿಂದೆ 100 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ ಈ ದೇವಸ್ಥಾನದ ಅಭಿವೃದ್ದಿಗೂ ಪಣತೊಟ್ಟು ನಿಲ್ಲಲಾಗಿದೆ ಎಂದು ಹೇಳಿದರೆ ತಪ್ಪಾಗಲಾರದೆಂದರು. ಕಿಸ್ಕಿಂದೆ ಆಂಜನಾದ್ರಿ ಬೆಟ್ಟದ ಮೇಲೆ ಹತ್ತಲು ಸುಮಾರು 575 ಮೆಟ್ಟಲುಗಳಿದ್ದು ಅಸಂಖ್ಯಾತ ಜನರು ಈ ದೇವಸ್ಥಾನಕ್ಕೆ ಬರು ಹೋಗುವ ಕಾರ್ಯ ನಡೆಯುತ್ತಾ ಸಾಗಿದೆ ಎಂದು ಹೇಳಿದ ಘೋರ್ಪಡೆ ಅವರು ತಾಳಿಕೋಟೆ ಆಶ್ರಯ ಬಡಾವಣೆಯ ಭಕ್ತರು ಕಳೆದ 15 ವರ್ಷಗಳ ಹಿಂದೆ ಮೂರ್ತಿ ಪ್ರತಿಷ್ಠಾಪನೆ ಕುರಿತು ಕೈಕೊಂಡ ಕಾರ್ಯ ಚಟುವಟಿಕೆಗಳ ಕುರಿತು ಮಂದಿರ ನಿರ್ಮಾಣವಾಗಿ ಉದ್ಘಾಟನೆಯಾಗಿದ್ದರ ಕುರಿತು ಪತ್ರಿಕೆಗಳಲ್ಲಿ ಬರೆದು ಭಹಿರಂಗ ಪಡಿಸಿದ್ದರ ಕುರಿತು ವಿವರಿಸಿದ ಅವರು ಇಲ್ಲಿಯ ಭಕ್ತರು ಸುಮಾರು 15 ಲಕ್ಷ ರೂ. ಖರ್ಚು ಮಾಡಿ ಕಳೆದ ವರ್ಷ ನೂತನ ರಥವನ್ನು ನಿರ್ಮಿಸಿ ರಥೋತ್ಸವವನ್ನು ಜರುಗಿಸುತ್ತಾ ಸಾಗಿರುವದು ಈ ಭಾಗದಲ್ಲಿ ಭಕ್ತಿಭಾವವೆಂಬುದು ಕಡಿಮೆ ಇಲ್ಲವೆಂದು ಬಡಾವಣೆ ನಾಗರಿಕರ ಕಾರ್ಯ ಬಣ್ಣಿಸಿದರು.
ಸಾನಿದ್ಯ ವಹಿಸಿದ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರು ಬಡಾವಣೆ ನಾಗರಿಕರ ಸೇವಾ ಕಾರ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೂರ್ವ ವೇ.ಎಸ್.ಎಂ.ಬೇನಾಳಮಠ ಅವರು ಆಶ್ರಯ ಬಡಾವಣೆಯ ನಾಗರಿಕರ ಸೇವಾ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ನಂತರ ಶ್ರೀ ಮಾರುತೇಶ್ವರರ ರಥೋತ್ಸವವು ವಿಜೃಂಬಣೆಯಿಂದ ಜರುಗಿತು.
ವೇದಿಕೆಯ ಮೇಲೆ ಲಕ್ಷ್ಮೀಕಾತ ಬಡಿಗೇರ, ವೇ.ಗುರುಶಾಂತಯ್ಯ ಮಹಾ ಸ್ವಾಮಿಗಳು, ಪತ್ರಕರ್ತ ಬಸವರಾಜ ಕಟ್ಟಿಮನಿ, ಶಿಕ್ಷಕರಾದ ಪ್ರಕಾಶ ಕಟ್ಟಿಮನಿ, ದೇವರಾಜ ಬಾಗೇವಾಡಿ, ಎಸ್.ಎಸ್.ಗಡೇದ, ಮೊದಲಾದವರು ಇದ್ದರು.
ಕಾರ್ಯಕ್ರಮದ ನಂತರ ಶ್ರೀ ಮಾರುತೇಶ್ವರ ತೋಟ್ಟಿಲು ಕಾರ್ಯಕ್ರಮವು ಸುಮಂಗಲೆಯರಿಂದ ಜರುಗಿತು.