ನಿಮ್ಮ ಮತ ನಿಮ್ಮ ಧ್ವನಿ:ಸಿಇಓ ಡಾ. ಗಿರೀಶ್ ಬದೋಲೆ
ಬೀದರ. ಏ. 24: ನಿಮ್ಮ ಮತವೆ ನಿಮ್ಮ ಧ್ವನಿಯಾಗಿರುವುದರಿಂದ ತಪ್ಪದೇ ಎಲ್ಲರೂ ಮತದಾನ ಮಾಡಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಫ್ ಸಮಿತಿ ಅಧ್ಯಕ್ಷರಾದ ಡಾ|| ಗಿರೀಶ್ ಬದೋಲೆ ಹೇಳಿದರು.
ಅವರು ಮಂಗಳವಾರ ಜಿಲ್ಲಾ ಸ್ವೀಫ್ ಸಮಿತಿ ಬೀದರ ವತಿಯಿಂದ ಕೇಂದ್ರ ಬಸ್ ನಿಲ್ದಾಣ ಬೀದರನಲ್ಲಿ ಮತದಾನ ಜಾಗೃತಿ ಕುರಿತ ಕರಪತ್ರಗಳನ್ನು ಬಸ್ಸುಗಳಿಗೆ ಅಂಟಿಸಿದ ನಂತರ ಮಾತನಾಡಿದರು.
ಬೀದರ ಕೇಂದ್ರ ಬಸ್ ನಿಲ್ದಾಣದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದರ ಉದ್ದೇಶ ಇಲ್ಲಿ ಪ್ರತಿದಿನ ಸಾವಿರಾರು ಪ್ರಯಾಣಿಕರು ತಿರುಗಾಡುತ್ತಾರೆ ಅವರಿಗೆ ಮತದಾನದ ಮಹತ್ವ ಕುರಿತು ಅರಿವು ಮೂಡಿಸುವದರ ಜೊತೆಗೆ ಕಳೆದ ಸಲಕ್ಕಿಂತ ಈ ಭಾರಿ ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣಾ ಕ್ಷೇತ್ರದಲ್ಲಿ ಹೆಚ್ಚು ಮತದಾನವಾಗಬೇಕಿದೆ ಹಾಗಾಗಿ ಜನರು ತಮ್ಮ -ತಮ್ಮ ಊರುಗಳಲ್ಲಿ ಎಲ್ಲರೂ ಮತದಾನ ಮಾಡುವಂತೆ ತಿಳಿಸಬೇಕೆಂದು ಹೇಳಿದರು.
ಮತದಾನ ಜಾಗೃತಿ ಕುರಿತ 500 ಕರಪತ್ರಗಳನ್ನು ಬಸ್ಸುಗಳಿಗೆ ಅಂಟಿಸುತ್ತಿದ್ದೆವೆ. ಇದರ ಜೊತೆಗೆ ಪ್ರಯಾಣಿಕರ ಟಿಕೆಟ್ ಮೇಲೆ ಮತದಾನ ಜಾಗೃತಿ ಕುರಿತು ಸಂದೇಶ ಇರುವ ಚೀಟಿಗಳನ್ನು ನೀಡುವ ಮೂಲಕ ಸಾರಿಗೆ ಇಲಾಖೆಯವರು ಜನರಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಇದರ ಜೊತೆಗೆ ಜಿಂಗಲಗಳನ್ನು ಮಾಡಿ ಜನರಿಗೆ ಸಂದೇಶ ತಲುಪಿಸುವ ಕೆಲಸ ಮಾಡುತ್ತಿದ್ದೆವೆ ಜಿಲ್ಲೆಯ ಎಲ್ಲಾ ನಾಗರಿಕರು ಮೇ 7 ರಂದು ತಪ್ಪದೆ ಮತದಾನ ಮಾಡಬೇಕು. ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾರಿಗೆ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ಬೀದರ ಸಹಾಯಕ ಆಯುಕ್ತರಾದ ಲವೀಶ್ ಓರ್ಡಿಯಾ ಅವರು ಮಾತನಾಡಿ ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣಾ ಕ್ಷೇತ್ರ ಬೀದರ ಹಾಗೂ ಕಲಬುರಗಿ ಜಿಲ್ಲೆಯ ಕೆಲವು ತಾಲ್ಲೂಕುಗಳು ಬರುವುದರಿಂದ ಇಲ್ಲಿ ಹೆಚ್ಚಿನ ಮತದಾನ ಆಗಬೇಕಾದರೆ ಎಲ್ಲರೂ ಮತದಾನ ಮಾಡಬೇಕು ಮತ್ತು ತಮ್ಮ ಮನೆಯ ಎಲ್ಲಾ ಸದಸ್ಯರು ಮತದಾನ ಮಾಡುವಂತೆ ಅವರಿಗೆ ತಿಳಿಸಬೇಕು ಎಂದು ಹೇಳಿದರು.
ಬಸ್ಸುಗಳಿಗೆ ಕರಪತ್ರಗಳನ್ನು ಅಂಟಿಸಿದ ನಂತರ ಬಸ್ಸಿನ ಒಳಗಡೆ ಹೋಗಿ ಮೇ 7 ರಂದು ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದ ಸಿಇಓ ಅವರು ನಂತರ ಮತದಾನ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಸಹಾಯಕ ಆಯುಕ್ತರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಸೆಲ್ಪಿ ತೆಗೆಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಬೀದರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಎಸ್.ಪುಲೆ, ವಿಭಾಗೀಯ ಸಂಚಾರಿ ಅಧಿಕಾರಿ ಐ.ಎಂ. ಬಿರಾದಾರ, ವಿಭಾಗೀಯ ತಾಂತ್ರಿಕ ಶಿಲ್ಪಿ ಚಂದ್ರಕಾಂತ, ಘಟಕ ವ್ಯವಸ್ಥಾಪಕ ವಿಠಲ ಭೋವಿ, ಜಿಲ್ಲಾ ಸ್ವೀಫ್ ಸಮಿತಿ ನೋಡಲ್ ಅಧಿಕಾರಿ ಗೌತಮ ಅರಳಿ, ಜಿಲ್ಲಾ ಸಂಯೋಜಕರಾದ ಪಂಡಿತ್ ವಾಡೇಕರ್ ಹಾಗೂ ಸಾರಿಗೆ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.