ಅಶೋಕ್ ವಿರುದ್ಧ ಮುನಿರತ್ನ ಷಡ್ಯಂತ್ರ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಸೆ.೨೧:ಬಿಜೆಪಿ ಶಾಸಕ ಮುನಿರತ್ನ ಅವರು ಆರ್. ಅಶೋಕ್ ಅವರ ವಿರುದ್ಧ ನಡೆಸಿದ ಷಡ್ಯಂತ್ರ ಕೇಳಿ ನನಗೆ ದಿಗ್ಭ್ರಮೆಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮುನಿರತ್ನ ಅವರ ಏಡ್ಸ್ ಟ್ರ್ಯಾಪ್ ಜಾಲದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಪ್ರಪಂಚ, ದೇಶ ಎಲ್ಲೂ ಕೂಡ ಈ ರೀತಿ ಸಂಚು ಎಲ್ಲೂ ನಡೆದಿಲ್ಲ. ಪಾಪ ಅಶೋಕ್ ಅವರ ವಿರುದ್ಧ ಷಡ್ಯಂತ್ರ ಕೇಳಿ ದಿಗ್ಭ್ರಾಂತಿಗೆ ಒಳಗಾಗಿದ್ದೇನೆ ಎಂದರು.
ಶಾಸಕ ಮುನಿರತ್ನ ಅವರ ಬಗ್ಗೆ ಪ್ರಾರಂಭದಲ್ಲಿ ಅಶೋಕ್ ಏನು ಮಾತನಾಡಿದ್ದಾರೋ ಅದನ್ನು ಗಮನಿಸಿದ್ದೇನೆ.ಈಗ ಅವರು ಮಾತನಾಡಿದ್ದಾರೋ ಅದನ್ನು ಗಮನಿಸಿಲ್ಲ. ಮೊದಲು ಅಶೋಕಣ್ಣ, ವಿಜಯೇಂದ್ರಣ್ಣ, ಕುಮಾರಣ್ಣ, ಡಾ. ಮಂಜುನಾಥ್, ಸಿ.ಟಿ ರವಿ ಅಣ್ಣ ಎಲ್ಲರೂ ಅವರ ಅಭಿಪ್ರಾಯಗಳನ್ನು ಹೇಳಬೇಕು. ಸತ್ಯಾಸತ್ಯತೆಯನ್ನು ತಿಳಿಸಬೇಕು. ಅವರು ಇದಕ್ಕೆ ಉತ್ತರ ಕೊಡಬೇಕು ಎಂದು ಹೇಳಿದರು.
ಈ ವಿಚಾರದಲ್ಲಿ ಏನು ಉತ್ತರಿಸುವುದು, ಸತ್ಯ ಏನಿದೆಯೋ ನಮಗೆ ಗೊತ್ತಿಲ್ಲ. ಯಾರ್‍ಯಾರದು ಏನಾಗಿದೆಯೋ ಮಾಹಿತಿ ಇಲ್ಲ, ನಾವು ಎಲ್ಲವನ್ನು ಪರಿಶೀಲಿಸಬೇಕಿದೆ ಎಂದು ವ್ಯಂಗ್ಯವಾಗಿ ಹೇಳಿದರು. ಶಾಸಕ ಮುನಿರತ್ನ ವಿರುದ್ಧ ಡಿಕೆ ಸಹೋದರರು ಷಡ್ಯಂತ್ರ ನಡೆಸಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಗಳಬಗ್ಗೆ ಕೇಳಿದ ಪ್ರಶ್ನೆಗೆ ಅವರು ನನ್ನನ್ನು ನೆನೆಸಿಕೊಳ್ಳುತ್ತಲೇ ಇರಬೇಕು. ಹಾಗಾಗಿ ಮಾತನಾಡುತ್ತಿದ್ದಾರೆ. ಮುನಿರತ್ನ ಸಮರ್ಥನೆಗೆ ನಿಂತಿರುವ ಬಿಜೆಪಿ ನಾಯಕರ ನಡೆಯನ್ನು ರಾಜ್ಯದ ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ ಡಿ ನೋಟಿಫಿಕೇಷನ್ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ. ಎಲ್ಲವನ್ನೂ ನೋಡಿ ಪ್ರತಿಕ್ರಿಯಿಸುತ್ತೇನೆ ಎಂದರು.
ರಸ್ತೆಗಳ ಪರಿಶೀಲನೆ
ಕಳೆದವಾರ ಬಿಬಿಎಂಪಿ ಅಧಿಕಾರಿಗಳಿಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸೂಚನೆ ಕೊಟ್ಟಿದೆ. ಹಲವೆಡೆ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನೂ ಕೆಲವು ಕಡೆ ಕೆಲಸ ನಡೆದಿದೆ. ಇವೆಲ್ಲವನ್ನೂ ಸ್ಥಳಕ್ಕೆ ತೆರಳಿ ಗುಣಮಟ್ಟ ಪರಿಶೀಲನೆ ಮಾಡುತ್ತೇನೆ ಎಂದು ಅವರು ಹೇಳಿದರು.
ಬೇರೆ ರಾಜ್ಯಗಳಿಗೂ ಭೇಟಿ ನೀಡಿದ್ದೇನೆ. ದೆಹಲಿ ರಸ್ತೆಗಳನ್ನು ನೋಡಿದ್ದೇನೆ. ಅಲ್ಲಿನ ರಸ್ತೆಗಳ ದುರಾವಸ್ಥೆಯ ವೀಡಿಯೊ ಇದೆ. ಹಾಕಿದರೆ ಆ ರಾಜ್ಯಗಳಿಗೆ ಅವಮಾನ ಆಗುತ್ತೆ,. ಅದು ನಮಗೆ ಬೇಡ. ನಾವು ಇವರಿಗಿಂತ ಚೆನ್ನಾಗಿಯೇ ರಸ್ತೆಗಳ ಸುಧಾರಣೆ ಮಾಡುವ ಒಳ್ಳೆಯ ಕೆಲಸವನ್ನು ಮಾಡಿದ್ದೇವೆ. ಪರಿವರ್ತನೆ ತರುವ ಪ್ರಯತ್ನ ನಡೆಸಿದ್ದೇವೆ. ನಮ್ಮ ನಾಗರಿಕರಿಗೆ ಸೌಕರ್ಯ ಸವಲತ್ತು ಕೊಡುವುದು ನಮ್ಮ ಬದ್ಧತೆ ಎಂದರು.