ಗಣೇಶೋತ್ಸವ: ಎಲ್ಲೆಡೆ ಪೊಲೀಸ್ ಸರ್ಪಗಾವಲು
ತುಮಕೂರು, ಸೆ. ೨೧- ಜಿಲ್ಲಾ ಕೇಂದ್ರ ತುಮಕೂರು ಹಾಗೂ ಸಿರಾ ನಗರದಲ್ಲಿಂದು ಹಿಂದೂ ಮಹಾಗಣಪತಿ ಮೂರ್ತಿಗಳ ವಿಸರ್ಜನಾ ಮಹೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಎರಡೂ ನಗರಗಳಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಜ್ಜೆ ಹೆಜ್ಜೆಗೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಗಣೇಶ ಚತುರ್ಥಿಯಂದು ನಗರದ ಬಿ.ಜಿ.ಎಸ್. ವೃತ್ತದಲ್ಲಿರುವ ನಾಗರಕಟ್ಟೆಯಲ್ಲಿ ಭಜರಂಗ ದಳದಿಂದ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗಿತ್ತು. ಹಾಗೆಯೇ ಸಿರಾ ನಗರದ ಶ್ರೀ ಗವಿ ಆಂಜನೇಯ ದೇವಾಲಯದಲ್ಲೂ ಹಿಂದೂ ಮಹಾಸಭಾ ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿತ್ತು.
ರಾಜ್ಯದ ನಾಗಮಂಗಲ ಸೇರಿದಂತೆ ವಿವಿಧೆಡೆ ಗಣೇಶೋತ್ಸವದ ವೇಳೆ ನಡೆದಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಎರಡು ನಗರದಲ್ಲಿ ನಡೆಯುತ್ತಿರುವ ಹಿಂದೂ ಮಹಾಗಣೇಶೋತ್ಸವಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ.
ನಗರದಲ್ಲಿ ಇಂದು ನಡೆಯುತ್ತಿರುವ ಭಜರಂಗದಳದ ಗಣಪತಿ ವಿಸರ್ಜನಾ ಮಹೋತ್ಸವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಿನ್ನೆ ಸಂಜೆ ನಗರದ ವಿವಿಧೆಡೆ ಪೊಲೀಸರಿಂದ ಪಥ ಸಂಚಲನ ನಡೆಸಿ ಶಾಂತಿ-ಸುವ್ಯವಸ್ಥೆ ಕಾಪಾಡುವಂತೆ ಸಂದೇಶ ರವಾನಿಸಲಾಯಿತು.
ನಗರದ ನಾಗರಕಟ್ಟೆ ಗಣಪತಿ ವಿಸರ್ಜನಾ ಮೆರವಣಿಗೆ ಬಂದೋಬಸ್ತ್ ಕಾರ್ಯಕ್ಕಾಗಿ ಇಬ್ಬರು ಡಿವೈಎಸ್?ಪಿ, ೯ ಇನ್ಸ್‌ಪೆಕ್ಟರ್, ೨೦ ಸಬ್ ಇನ್ಸ್‌ಪೆಕ್ಟರ್, ೬೨ ಎಎಸ್‌ಐ, ೫೨೦ ಪೊಲೀಸ್ ಕಾನ್ಸ್‌ಟೇಬಲ್, ೧೦೦ ಹೋಂ ಗಾರ್ಡ್ಸ್, ೩ ಕೆಎಸ್‌ಆರ್‌ಪಿ ತುಡಡಿ ಹಾಗೂ ೫ ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದ್ದು, ಗಣೇಶೋತ್ಸವದ ಶೋಭಯಾತ್ರೆ ಸಾಗುವ ರಸ್ತೆಗಳು, ಪ್ರಮುಖ ವೃತ್ತಗಳಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ಹಾಗೆಯೇ ಸಿರಾ ನಗರದಲ್ಲೂ ಸಹ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಮದ್ಯ ಮಾರಾಟ ನಿಷೇಧ
ತುಮಕೂರು ನಗರ ಮತ್ತು ಸಿರಾ ನಗರದಲ್ಲಿ ಗಣೇಶೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ ೬ ಗಂಟೆಯಿಂದ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಆದೇಶಿಸಿದ್ದಾರೆ.
ಸಿರಾದಲ್ಲಿ ಇಂದು ಬೆಳಿಗ್ಗೆ ೬ ಗಂಟೆಗೆಯಿಂದ ಸೆ. ೨೨ರ ಮಧ್ಯರಾತ್ರಿ ೧೨ರ ವರೆಗೂ ಹಾಗೂ ತುಮಕೂರು ನಗರದಲ್ಲಿ ಇಂದು ಬೆಳಿಗ್ಗೆ ೬ ರಿಂದ ಮಧ್ಯರಾತ್ರಿ ೧೨ರ ವರೆಗೂ ಒಣದಿನವೆಂದು ಘೋಷಿಸಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ನಗರದ ಟೌನ್‌ಹಾಲ್ ವೃತ್ತದ ನಾಗರಕಟ್ಟೆಯಿಂದ ಗಣೇಶೋತ್ಸವದ ಶೋಭಯಾತ್ರೆ ಯಾತ್ರೆಯು ಆರಂಭಗೊಂಡಿದ್ದು, ಲಕ್ಕಪ್ಪ ವೃತ್ತ, ಜೆ.ಸಿ. ರಸ್ತೆ, ಬಂಡಿಪೇಟೆ ವೃತ್ತ, ಸ್ವತಂತ್ರ ಚೌಕ, ಅಶೋಕ ರಸ್ತೆ, ಬಿಜಿಎಸ್ ವೃತ್ತ, ಎಂಜಿ ರಸ್ತೆ, ಜೈನ್ ಟೆಂಪಲ್ ರಸ್ತೆ, ರಾಮಪ್ಪ ವೃತ್ತ, ಡಾ. ಬಿ ಆರ್ ಅಂಬೇಡ್ಕರ್ ರಸ್ತೆ, ಕೋಟೆ ಆಂಜನೇಯಸ್ವಾಮಿ ವೃತ್ತ, ಗಾರ್ಡನ್ ರಸ್ತೆ ಮುಖೇನ ಸಾಗಿ ರಾತ್ರಿ ಕೆ.ಎನ್.ಎಸ್. ಕಲ್ಯಾಣಿಯಲ್ಲಿ ಗಣೇಶಮೂರ್ತಿಯನ್ನು ವಿಸರ್ಜಿಸಲಾಗುವುದು.
ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳಾದ ನಂದಿ ಧ್ವಜ, ನಾಸಿಕ್ ಡೋಲ್, ವೀರಗಾಸೆ, ಡಂಕವಾದ್ಯ, ತಮಟೆ ವಾದ್ಯ ಪಾಲ್ಗೊಂಡಿವೆ.
ಗಣೇಶಮೂರ್ತಿ ಮೆರವಣಿಗೆ ಸಾಗುವ ಪ್ರಮುಖ ವೃತ್ತಗಳಲ್ಲಿ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ.