ದಲಿತ ಯುವಕನ ಹತ್ಯೆಗೆ ಈಶ್ವರಸಿಂಗ್ ಖಂಡನೆ
ಬೀದರ್:ಏ.24:ಯಾದಗಿರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ದಲಿತ ಯುವಕನನ್ನು ಕೊಲೆ ಮಾಡಿದ್ದನ್ನು ಉಗ್ರವಾಗಿ ಖಂಡಿಸಲಾಗುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕ ಈಶ್ವರಸಿಂಗ್ ಠಾಕೂರ್ ತಿಳಿಸಿದ್ದಾರೆ.
ರೊಟ್ಟಿ ಕೇಳಿದ್ದನ್ನೇ ಕಾರಣವಾಗಿಟ್ಟುಕೊಂಡು ರಾಕೇಶ ಎಂಬಾತನನ್ನು ಫಯಾಜ್, ಆಸೀಫ್ ಮತ್ತಿತರರು ಕೊಲೆ ಮಾಡಿದ್ದಾರೆ. ಯುವಕನ ಮನೆಗೆ ಹೋಗಿ, ಜಾತಿ ನಿಂದನೆ ಮಾಡಿ, ಕೊಲೆ ಮಾಡಲಾಗಿದೆ ಎಂದು ಯುವಕನ ತಾಯಿ ಮಂಜಮ್ಮ ದೂರು ಸಲ್ಲಿಸಿದ್ದಾರೆ. ಪೆÇಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಈಶ್ವರಸಿಂಗ್ ಠಾಕೂರ್ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನೇಹಾ ಎಂಬ ವಿದ್ಯಾರ್ಥಿನಿಯನ್ನು ಇರಿದು ಕೊಲೆ ಮಾಡಲಾಗಿದೆ. ಬೀದರ್ ನಗರದಲ್ಲಿ ಬಾಲಕಿಯೊಬ್ಬಳ ಮೇಲೆ ದೌರ್ಜನ್ಯ ಎಸಗಲಾಗಿದೆ. ಇದೀಗ ಯಾದಗಿರಿಯಲ್ಲಿ ಅಮಾಯಕ ಯುವಕನನ್ನು ಕ್ಷುಲ್ಲಕ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ. ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಈ ಘಟನೆಗಳೇ ಸಾಕ್ಷಿಯಾಗಿವೆ ಎಂದು ಈಶ್ವರಸಿಂಗ್ ದೂರಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂಗಳ ಮೇಲೆ ಹಲ್ಲೆ, ಅತ್ಯಾಚಾರ ನಡೆಯುತ್ತಿವೆ. ಕಾಂಗ್ರೆಸ್‍ನ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯೇ ಇದಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸರಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.