ಕನ್ನಡ ನಾಡಿಗೆ ಡಾ.ರಾಜಕುಮಾರ್ ಕೊಡುಗೆ ಅನನ್ಯ
ಕಲಬುರಗಿ:ಏ.24: ನಾಡಿನ ಪ್ರಸಿದ್ಧ ವ್ಯಕ್ತಿಯಾಗಿ, ಮೇರು ನಟ, ಗಾಯಕ, ಕನ್ನಡಪರ ಚಳುವಳಿಯ ಹೋರಾಟಗಾರರಾಗಿ, ಸಮಾಜ ಸೇವಕರಾಗಿ ಐದು ದಶಕಗಳ ಕಾಲ ತಮ್ಮದೇ ಆದ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿ ಜನಮಾನಸದಲ್ಲಿ ‘ಅಣ್ಣಾವ್ರ’ ಸ್ಥಾನವನ್ನು ಪಡೆದ ‘ಬಂಗಾರದ ಮನುಷ್ಯ’ ಡಾ.ರಾಜಕುಮಾರ ಅವರದು ಬಹುಮುಖ ವ್ಯಕ್ತಿತ್ವವಾಗಿದೆ. ಕನ್ನಡ ನಾಡಿಗೆ ಅವರ ಕೊಡುಗೆ ಅನನ್ಯವಾಗಿದೆ ಎಂದು ಡಾ.ರಾಜಕುಮಾರ್ ಅವರ ಆಪ್ತ ಅಭಿಮಾನಿ ವಿಜಯಕುಮಾರ ಪೊಲೀಸ್ ಪಾಟೀಲ ಹೇಳಿದರು.
ನಗರದ ಶಹಾಬಜಾರ ನಾಕಾದಲ್ಲಿ ‘ಮುತ್ತುರಾಜ್ ಮೆಲೋಡಿಯಸ್’, ‘ಡಾ.ರಾಜಕುಮಾರ ಅಭಿಮಾನಿ ಬಳಗ’ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಇವುಗಳ ವತಿಯಿಂದ ಬುಧವಾರ ಜರುಗಿದ ‘ನಟಸಾರ್ವಭೌಮ ಡಾ.ರಾಜಕುಮಾರ್ ಅವರ 95ನೇ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಡಾ.ರಾಜಕುಮಾರ ಅವರು ಹೃದಯ ಶ್ರೀಮಂತರಾಗಿದ್ದರು. ಬಡವರಪರ, ಕನ್ನಡ ನಾಡು, ನುಡಿಗೆ ಸಂಬಂಧಿಸಿದಂತೆ ಅವರಲ್ಲಿರುವ ಕಾಳಜಿ ಅತ್ಯಂತ ಶ್ಲಾಘನೀಯವಾಗಿದೆ. ನಟ ಸಾರ್ವಭೌಮರಾಗಿ, ಗೌರವ ಡಾಕ್ಟರೇಟ್, ಕರ್ನಾಟಕ ರತ್ನ, ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿರುವದು ನಮ್ಮ ನಾಡಿಗೆ ಸಂದ ಗೌರವವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ರಾಘವೇಂದ್ರ ವಿ.ಪೊಲೀಸ್ ಪಾಟೀಲ, ಮಂಜುನಾಥ ವಿ.ಪೊಲೀಸ್ ಪಾಟೀಲ, ಗುಂಡೇರಾವ ಹಂಗರಗಿ, ಸೂರ್ಯಕಾಣತ ಬಂಗರಗಿ, ಶಿವಾನಂದ ಕೋರವಾರ, ಆಕಾಶ ಯಾದಗೀರ, ರಮೇಶ ಜೇವರ್ಗಿ, ಭರತ, ಸಿದ್ದು ಸೇರಿದಂತೆ ಮುಂತಾದವರು ಇದ್ದರು.