ಜ್ಞಾನದ ಹಿಂದೆ ಹೋದವನು ಯಶಸ್ಸು ಕಾಣುತ್ತಾನೆ : ಡೋಳೆ
ಔರಾದ್ :ಏ.24: ವಿದ್ಯಾರ್ಥಿಗಳು ಪಠ್ಯದ ಜೊತೆ ಸಾಧಕರ ಜೀವನ ಚರಿತ್ರೆ ಓದಬೇಕು, ಜ್ಞಾನದ ಹಿಂದೆ ಹೋದವ ಯಶಸ್ಸು ಕಾಣುತ್ತಾನೆ ಎಂದು ನಾಲಂದಾ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಮನ್ಮಥ ಡೋಳೆ ಹೇಳಿದರು.
ಪಟ್ಟಣದ ಇಕ್ರಾ ಪಿಯುಸಿ ಕಾಲೇಜಿನಲ್ಲಿ ಮಂಗಳವಾರ ನಡೆದ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ಸಾಧಕ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಂಡು, ಛಲ ಮತ್ತು ಗುರಿಯೊಂದಿಗೆ ಮುನ್ನೆಡೆದರೆ ಸಾಧನೆಯ ಮೆಟ್ಟಿಲೇರಬಹುದು ಎಂದರು. ಜ್ಞಾನದ ಹಿಂದೆ ಹೋದವರು ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಮಕ್ಕಳಿಗೆ ಶಿಕ್ಷಣ ನೀಡಿದರೆ, ಇಡೀ ಕುಟುಂಬ ವಿದ್ಯಾವಂತರಾಗುತ್ತಾರೆ. ಪ್ರತಿಯೊಬ್ಬರು ಮಕ್ಕಳ ಶಿಕ್ಷಣಕ್ಕೆ ಪ್ರಮುಖ ಅದ್ಯತೆ ನೀಡಬೇಕು ಎಂದು ಹೇಳಿದರು.
ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಓಂಪ್ರಕಾಶ ದಡ್ಡೆ ಮಾತನಾಡಿ, ಸಾಧನೆ ಮತ್ತು ಸಮಾಜಮುಖಿ ಸ್ಪಂದನೆಯಿಂದ ಜೀವನ ಸಾರ್ಥಕ್ಯ ಪಡೆಯುತ್ತದೆ. ಶಿಕ್ಷಣ ಪ್ರೇಮಿ, ಮಾನವತಾವಾದಿ ಹಾಗೂ ಅಸಹಾಯಕರ ಸಂಕಷ್ಟಗಳಿಗೆ ಸದಾ ಸ್ಪಂದಿಸಬೇಕು. ಇದು ಶ್ರೇಷ್ಠ ಕೆಲಸವಾಗಿದೆ. ವಿದ್ಯಾರ್ಥಿಗಳು ಕಲಿತ ಶಾಲಾ ಕಾಲೇಜಿಗೆ ಶಿಕ್ಷಕ-ಪಾಲಕರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳಲ್ಲಿ ಪಠ್ಯದ ಜೊತೆಗೆ ವಚನ ಸಾಹಿತ್ಯದ ಅರಿವು ಮೂಡಿದಲ್ಲಿ ಅವರ ಬದುಕು ಶ್ರೇಷ್ಠವಾಗುತ್ತದೆ. ಆಧುನಿಕ ಜೀವನ ಶೈಲಿ ವಿದ್ಯಾರ್ಥಿಗಳಿಗೆ ಮಾರಕವಾಗಿ ಇರುವುದರಿಂದ ಸಾಹಿತಿಗಳು, ಚಿಂತಕರು ಸಾಧಕರ ಜೀವನ ಚರಿತ್ರೆ ಓದುವ ಮೂಲಕ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು’ ಎಂದರು.
ಕಸಾಪ ಮಾಜಿ ತಾಲೂಕು ಅಧ್ಯಕ್ಷ ಜಗನ್ನಾಥ ಮೂಲಗೆ ಮಾತನಾಡಿ, ವಿದ್ಯಾರ್ಥಿ ಜೀವನ ಅಮೂಲ್ಯವಾಗಿದೆ. ಅದರ ಸದುಪಯೋಗ ಪಡೆದುಕೊಂಡು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಮಾತನಾಡಿದರು. ಪ್ರಾಂಶುಪಾಲ ಗಾಜಿ ಅಲೀ ಬೇಗ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ, ಎಬಿವಿಪಿ ಪ್ರಮುಖ ಅಶೋಕ ಶೆಂಬೆಳ್ಳಿ, ಅಂಬಾದಾಸ ನಳಗೆ, ಉಪನ್ಯಾಸಕರಾದ ಸಂಗಮೇಶ ಸ್ವಾಮಿ, ಅಮಿರ್, ರಾಜಶೇಖರ ಬಿರಾದಾರ್, ಟಿ. ರಡ್ಡಯ್ಯ, ಪಾಂಡುರಂಗ ಬೋನೆ, ಪ್ರಿಯದರ್ಶನಿ ಪಂಚಾಕ್ಷರಿ, ಸಿ ಸ್ವಾಮಿ, ಖದಿರ್, ಅಮಿರ್ ಹುಸೇನ್, ಮಲ್ಲಿಕಾರ್ಜುನ ಟೇಕರಾಜ್, ಅನಿಲ ಮೇತ್ರೆ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡರು. ಈ ವೇಳೆ ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು.