ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಅಪಾಯದಲ್ಲಿದೆ: ಡಿ.ಜಿ ಸಾಗರ
ಬೀದರ್:ಏ.24: 2024 ಲೋಕಸಭಾ ಚುನಾವಣೆ ಒಂದು ಐತಿಹಾಸಿಕ ಕವಲು ದಾರಿಗೆ ಭಾರತೀಯರನ್ನು ತಂದು ನಿಲ್ಲಿಸಿದೆ. ಆರ್.ಎಸ್.ಎಸ್‍ನವರು ಮಾಧ್ಯಮ, ನ್ಯಾಯಾಂಗ, ಕಾಯಾರ್ಂಗ ಅಕ್ರಮಿಸಿಕೊಂಡು 140 ಕೋಟಿ ಭಾರತೀಯರನ್ನು ತಮ್ಮ ಒತ್ತೆಯಾಳುಗಳ್ಳನಾಗಿ ಮಾಡಿಕೊಂಡು ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರವರು ರಚಿಸಿದ ಭಾರತದ ಸಂವಿಧಾನ ಬದಲಾಯಿಸಿ “ಮನುವಾದಿ ಸಂವಿಧಾನ ಜಾರಿ ಮಾಡಿ ಇಡೀ ವ್ಯವಸ್ಥೆಯನ್ನು ತಮ್ಮ ಕಪಿಮುಷ್ಠಿಯಲ್ಲಿರುವಂತೆ ನೋಡಿಕೊಳ್ಳುವ ಹುನ್ನಾರದ ಬಲೆ ಬಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ ಸಾಗರ ಹೇಳಿದರು.
ಮಂಗಳವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ವಿಶ್ವಜ್ಞಾನಿ, ಡಾ.ಬಿ.ಆರ್. ಅಂಬೇಡ್ಕರ್ ಅವರು “ಸಮ ಸಮಾಜ ತರಲು ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ವ್ಯವಸ್ಥೆ ನಿರ್ಮಾಣ ಮಾಡಲು ಭಾರತ ಸಂವಿಧಾನ ರಚಿಸಿ ಜಾರಿಗೊಳಿಸಿದರು. ಭಾರತ ಸಂವಿಧಾನದಿಂದ ಭಾರತೀಯರೆಲ್ಲರೂ ವಿಶೇಷವಾಗಿ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಮಹಿಳೆಯರು, ರೈತರು, ಅಲ್ಪಸಂಖ್ಯಾತರು ಹಾಗೂ ಕೃಷಿ ಕಾರ್ಮಿಕರು ತೆಲೆ ಎತ್ತಿ ನಿಲ್ಲುವ ಸಮಯದಲ್ಲಿಯೇ ಮನುವಾದಿ ಆರ್.ಎಸ್.ಎಸ್. ಮುಖವಾಣಿಯಾದ ಬಿ.ಜೆ.ಪಿ. ರಾಜ್ಯಾಧಿಕಾರದ ಮುಖಾಂತರ ಈ ಎಲ್ಲಾ ಭಾರತೀಯರ ಬದುಕಿಗೆ ಕಂಟಕವಾಗಿ ನಿಂತಿದೆ. ಭಾರತವನ್ನು ಭಾರತೀಯತೆಯನ್ನು ಭಾರತ ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಆದ್ದರಿಂದ 2024 ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಈ ತಿಂಗಳ 26ರಂದು ಮತ್ತು ಮೇ.0ರಂದು ಎರಡು ಹಂತದಲ್ಲಿ ನಡೆಯುವ ಚುನಾವಣೆಯಲ್ಲಿ ಭ್ರಷ್ಟ, ಕೋಮುವಾದಿ ಬಿ.ಜೆ.ಪಿ.ಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ಅವರು ಮನವಿ ಮಾಡಿದರು.
ಜನರಲ್ಲಿ ಜಾಗೃತಿ ಮೂಡಿಸಲು ಮುದ್ರಿಸಲಾದ ಕರಪತ್ರ ಬಿಡುಗಡೆ ಮಾಡಿ ಮಾತನ್ನು ಮುಂದುವರೆಸಿರುವ ಅವರು, ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಗೌರವ ನೀಡುವ, ದುರ್ಬಲ ವರ್ಗಗಳ ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಹಿತ ಕಾಪಾಡುವ ವಿಶೇಷವಾಗಿ ಕರ್ನಾಟಕದಲ್ಲಿ 05 ಗ್ಯಾರಂಟಿಗಳನ್ನು ಜಾರಿ ಮಾಡುವುದರ ಮುಖಾಂತರ ರಾಜ್ಯದಲ್ಲಿ ಯಾರು ಹಸಿವಿನಿಂದ ಇರಬಾರದೆಂದು ಮತ್ತು ಪ್ರತಿ ಬಡ ಕುಟುಂಬಗಳು ಆರ್ಥಿಕತೆಯಿಂದ ಸದೃಢತೆ ಮಾಡಲು ಪಣ ತೊಟ್ಟು ಜಾರಿ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರಕಾರದ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆಯೆನಿಸಿದೆ ಎಂದವರು ಹೇಳಿದರು.
ಒಂದು ದೇಶ, ಒಂದು ಚುನಾವಣೆ ಸಂಸದೀಯ ಪ್ರಜಾಪ್ರಭುತ್ವದಿಂದ ಅಧ್ಯಕ್ಷೀಯ ಸರ್ವಾಧಿಕಾರದೆಡೆಗೆ, ಬಿ.ಜೆ.ಪಿ.ಯ ಹಿರಿಯ ಮುಖಂಡ ಅಡ್ವಾಣಿ ಶುರು ಮಾಡಿದ್ದರು. “ಒಂದು ದೇಶ, ಒಂದು ಚುನಾವಣೆ ಎನ್ನುವ ಸಂಘಗೀಳನ್ನು 2014ರ ಚುನಾವಣೆಯ ನಂತರ ಬಿ.ಜೆ.ಪಿ. ಮುಂದುವರೆಸಿಕೊಂಡು ಬಂದಿದೆ. ಒಕ್ಕೂಟ ವ್ಯವಸ್ಥೆಯನ್ನೇ ಧಿಕ್ಕರಿಸಿ ಸಂಪೂರ್ಣ ಕೇಂದ್ರೀಕರಣಗೊಳಿಸಲ್ಪಟ್ಟ ವ್ಯವಸ್ಥೆಯನ್ನು ಜಾರಿ ಮಾಡಲು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಅಧ್ಯಕ್ಷತೆಯಲ್ಲಿ ಎಂಟು ಸದಸ್ಯರುಳ್ಳ ಸಮಿತಿಯಿಂದ ಸಲ್ಲಿಸಿದ ವರದಿ ಆಧಾರದ ಮೇಲೆ ದೇಶದಲ್ಲಿ ಅಧ್ಯಕ್ಷೀಯ ಸರ್ವಾಧಿಕಾರದೆಡೆಗೆ ತೆಗೆದುಕೊಂಡು ಹೋಗುವ ಹುನ್ನಾರ ಇದರಲ್ಲಡಗಿದೆ ಎಂದರು.
ಮೋದಿ ಸರ್ಕಾರದಲ್ಲಿ ದಲಿತರ ಮೇಲಿನ ದೌರ್ಜನ್ಯ ಮುಗಿಲು ಮುಟ್ಟಿದೆ. 2022ರ ಎನ್.ಸಿ.ಆರ್.ಬಿ ವರದಿ ಪ್ರಕಾರ ಪ್ರತಿ 6 ನಿಮಿಷಕ್ಕೊಂದರಂತೆ ದಲಿತರ ಮೇಲೆ ಒಂದು ದೌರ್ಜನ್ಯವಾಗುತ್ತಿದೆ. ಪ್ರತಿ ದಿನ 14 ಅತ್ಯಾಚಾರ ನಡೆಯುತ್ತಿದೆ. ಅದರಲ್ಲಿ 4 ಅತ್ಯಾಚಾರಗಳು ದಲಿತ ಬಾಲಕೀಯರ ಮೇಲೆ ನಡೆಯುತ್ತಿದೆ. ಪ್ರತಿ ದಿನ 03 ದಲಿತರನ್ನು ಕೊಲ್ಲಲಾಗುತ್ತಿದೆ. ಇನ್ನು ಥಳಿತ, ಕೊಲೆಗೆ ಯತ್ನ, ಅವಮಾನ ಜಾತಿನಿಂದನೆ, ಬಹಿμÁ್ಕರಗಳ ಲೆಕ್ಕವೇ ಇಲ್ಲ. ಇದಿಷ್ಟು ದಾಖಲಾಗಿರುವ ಪ್ರಕರಣಗಳ ಹಣೆಬರಹ, ದಾಖಲಾಗದ ಪ್ರಕರಣಗಳು ರಾಶಿಗಟ್ಟಲೇ ಅಲ್ಲಲ್ಲಿಯೇ ಉಸಿರಾಟ ನಿಲ್ಲಿಸಿ ಸಾಯುತ್ತಿವೆ. ಹೀಗೆ ನರೇಂದ್ರ ಮೋದಿಯವರ ಹತ್ತು ವರ್ಷಗಳ ಆಡಳಿತವು ದಲಿತರಿಗೆ ನರಕವನ್ನೇ ತೋರಿಸುತ್ತಿರುವಾಗ ಪೆÇೀಲಿಸ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯ ಸಿಗಲು ಸಾಧ್ಯವೇ? ದಲಿತರಿಗೆ ನ್ಯಾಯ ಕೊಡಿಸಲು ವಿಫಲವಾಗಿರುವ ಮೋದಿ ಸರ್ಕಾರ ಶೇ.96% ರಷ್ಟು ಪ್ರಕರಣಗಳನ್ನು ಬಾಕಿ ಉಳಿಸಿಕೊಂಡು ಗಹಗಹಿಸಿ ನಗುತ್ತಿದೆ. ಹಿಂದೂ ರಾಷ್ಟ್ರದ ಲಕ್ಷಣಗಳನ್ನು ತೋರಿಸುತ್ತಿದೆ. ಇಂಥ ದಲಿತ ವಿರೋದಿ ಬಿ.ಜೆ.ಪಿ. ಪಕ್ಷಕ್ಕೆ ಮತ ನೀಡದೆ ತಿರಸ್ಕರಿಸಬೇಕೆಂದು ಅವರು ಮನವಿ ಮಾಡಿದರು.
ಡಿ.ಎಸ್.ಎಸ್ ರಾಜ್ಯ ಸಂಘಟನಾ ಸಂಚಾಲಕ ಮಾರೂತಿ ಬೌದ್ದೆ ಮಾತನಾಡಿ, ನಾನು ವಯಕ್ತಿಕವಾಗಿ ಬಂಡೆಪ್ಪ ಖಾಶೆಂಪುರ ಅವರೊಟ್ಟಿಗಿರುವೆ. ಆದರೆ ಇಲ್ಲಿಯ ವರೆಗೆ ಯಾವುದೇ ಪಕ್ಷದ ಪ್ರಾಥಮಿಕ ಸದಸ್ಯತ್ವ ಇಲ್ಲ. ನಮ್ಮ ಶ್ರೀಮತಿಯವರು ಜೆಡಿಎಸ್ ಪಕ್ಷದಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ಆದರೆ ನಾನು ಯಾವುದೇ ಪಕ್ಷದಲ್ಲಿ ಗುರ್ತಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಅರುಣ ಪಟೇಲ, ಸಂಘಟನೆಯ ರಾಜ್ಯ ಖಜಾಂಚಿ ಬಿ.ಸಿ ವಾಲಿ, ಜಿಲ್ಲಾ ಸಂಘಟನಾ ಸಂಚಾಲಕ ಅಶೋಕ ಗಾಯಕವಾಡ, ರಾಜಕುಮಾರ ಗಾಯಕವಾಡ, ಬಸವಕಲ್ಯಾಣ ತಾಲೂಕು ಸಂಚಾಲಕ ವಾಮನ ಮೈಸಲಗೆ, ಭಾಲ್ಕಿ ಸಂಚಾಲಕ ರಮೇಶ ಬೇಲ್ದಾರ್, ಔರಾದ್ ಸಂಚಾಲಕ ಝರೆಪ್ಪ ವರ್ಮಾ, ಹುಮನಾಬಾದ್ ಸಂಚಾಲಕ ಸತೀಶ ರತ್ನಾಕರ್, ಬೀದರ್ ತಾಲೂಕು ಸಂಚಾಲಕ ರಾಹುಲ ಹಾಲಿಪ್ಪರ್ಗಾ, ದಲಿತ ಕಲಾ ಮಂಡಳಿ ಜಿಲ್ಲಾ ಸಂಚಾಲಕ ಶಿವರಾಜ ತಡಪಳ್ಳಿ, ನಗರ ಸಂಚಾಲಕ ವಿನೋದ ಬಂದಗೆ ಸೇರಿದಂತೆ ಹಲವರು ಪತ್ರಿಕಾ ಗೋಷ್ಟಿಯಲ್ಲಿದ್ದರು.