ಮತದಾನ ಜಾಗೃತಿ ಜಾಥಾ
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.24: ಮತದಾರರು ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳಾದ ಪ್ರೊ. ತಿಪ್ಪೇರುದ್ರಪ್ಪ ಜೆ  ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಾಣಿಜ್ಯಶಾಸ್ತ್ರ ಅಧ್ಯಯನ ಹಾಗೂ ಪ್ರದರ್ಶನ ಕಲೆ ವಿಭಾಗದ ಸಹಯೋಗದೊಂದಿಗೆ ಮಂಗಳವಾರ ವಿಶ್ವವಿದ್ಯಾಲಯದ ಆವರಣದಲ್ಲಿ ‘ಮತದಾನ ಜಾಗೃತಿ’ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್. ಎನ್ ರುದ್ರೇಶ ಮಾತನಾಡಿ, ಮತದಾನದ ಪ್ರಮಾಣವು ಆಘಾತಕಾರಿಯಾಗಿ ಕಡಿಮೆಯಾಗುತ್ತಿದೆ. ಮತದಾನ ಜಾಗೃತಿ ಅಭಿಯಾನಗಳಿಂದ ಮತದಾನದ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ ಎಂದರು.
ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರೊ. ಸದ್ಯೋಜಾತಪ್ಪ ಎಸ್. ಮಾತನಾಡಿ, ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ಮತದಾನ ಮಾಡುವಂತೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಮತದಾನದ ಪ್ರಾಮುಖ್ಯತೆ ಕುರಿತು ಜನರಲ್ಲಿ ಮತದಾನದ ಅರಿವು ಮೂಡಿಸಲು ಜಾಥಾವನ್ನು ನಗರದ ಹಲವಾರು ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಚುನಾವಣೆಯ ಕುರಿತು ಗೌತಮ ನಗರದಲ್ಲಿ ಬೀದಿ ನಾಟಕ ಪ್ರದರ್ಶನ ಮಾಡಲಾಯಿತು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿ ಮತದಾನ ಮಾಡುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಜೀಲಾನ್ ಬಾಷಾ, ಪ್ರೊ. ಭೀಮನಗೌಡ, ಡಾ. ಸಿದ್ದಪ್ಪ, ಡಾ. ರಾಘವೇಂದ್ರ, ಡಾ. ಜ್ಯೋತಿಲಿಂಗ, ನಾಟಕ ವಿಭಾಗದ ಅತಿಥಿ ಉಪನ್ಯಾಸಕರುಗಳಾದ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ಸಹನಾ ಪಿಂಜಾರ, ಹೇಮೇಶ್ವರ ಕೆ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.