ಕಳ್ಳರು ಕಾಕರು ಕಲ್ಲು ಹೊಡೆಯುವವರನ್ನು ಲೋಕಸಭೆಗೆ ಕಳುಹಿಸಬೇಡಿ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ: ಎ.24:- ಕಳ್ಳರು ಕಾಕರು ಕಲ್ಲು ಹೊಡೆಯುವವರನ್ನು ಲೋಕಸಭೆಗೆ ಕಳುಹಿಸಬೇಡಿ ಎಚ್.ಡಿ.ಕುಮಾರಸ್ವಾಮಿ ಮತ್ತು ಡಾ.ಮಂಜುನಾಥ್ ಅಂತವರನ್ನು ಲೋಕಸಭಾ ಸದಸ್ಯರನ್ನಾಗಿ ಮಾಡಿ ಎಂದು ವಿಶ್ರಾಂತ ಕುಲಪತಿ ಕೆ.ಎಸ್.ರಂಗಪ್ಪ ತಿಳಿಸಿದರು.
ಹರದನಹಳ್ಳಿ ಗ್ರಾಮದಲ್ಲಿ ಮಾಜಿ ಮೂಡ ಅಧ್ಯಕ್ಷ ವಿಜಯಕುಮಾರ್ ಅವರ ಮನೆಯಲ್ಲಿ ಜೆಡಿಎಸ್ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಿರುದ್ಯೋಗಿಗಳ ಮತ್ತು ಬಡವರ ಕಾರ್ಮಿಕರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಮಾಡಿಕೊಂಡಿದ್ದರು ಅವರೊಂದಿಗೆ ನಾನು ಕೂಡ ಹೊರದೇಶಗಳಿಗೆ ಪ್ರವಾಸ ಹೋದ ಸಂದರ್ಭದಲ್ಲಿ ಅವರ ಯೋಜನೆಗಳ ಬಗ್ಗೆ ನಮ್ಮೊಂದಿಗೆ ಹಂಚಿಕೊಂಡಿದ್ದರು ಅವರ ಗುರಿ ನಿರುದ್ಯೋಗಿಗಳಿಗೆ ಉದ್ಯೋಗ ಬಡವರ ಅಭಿವೃದ್ಧಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದರು ಆದರೆ ಕಾರಣಾಂತರ ಕೆಲವು ರಾಜಕೀಯ ಬೆಳವಣಿಗೆಗಳಿಂದ ಸಾಧನೆಯ ಹಾದಿಗಳು ಮೊಟಕುಗೊಂಡವು. ಆದರೆ ಈಗ ಅಂತಹದೇ ಒಂದು ಅವಕಾಶ ಸಿಕ್ಕುವ ವೇದಿಕೆ ಸಿದ್ಧವಾಗಿದ್ದು ಲೋಕಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿದರೆ ರಾಜ್ಯ ಅಭಿವೃದ್ಧಿಗೆ ಸೀಮಿತವಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ದೇಶದ ಅಭಿವೃದ್ಧಿಗೆ ಕೃಷಿ ಸಚಿವರಾಗುವುದು ಖಚಿತ ಎಂದರು.
ದೇಶ ಅಭಿವೃದ್ಧಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕರ್ನಾಟಕದಿಂದ ಹೆಚ್ಚು ಬಿಜೆಪಿ-ಜೆಡಿಎಸ್ ಸಂಸದರನ್ನ ಗೆಲ್ಲಿಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುವಂತೆ ಸಹಕರಿಸಿ. ದೇಶ ಅಭಿವೃದ್ಧಿಯತ್ತ ಸಾಗಲು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಅದೇ ರೀತಿ ಕರ್ನಾಟಕದಲ್ಲಿ ಜನರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನ ಕೊಡುವಂತಹ ಸಂಸದರು ಎಚ್.ಡಿ.ಕುಮಾರಸ್ವಾಮಿ ಆಗುತ್ತಾರೆ ಎಂದರು.
ನಾನು ಕೂಡ ಬೆಂಗಳೂರು ಗ್ರಾಮಾಂತರದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಪರ ಮತಯಾಚನೆ ಮಾಡಿದ್ದೇನೆ ಒಳ್ಳೆಯ ವಾತಾವರಣ ಇದ್ದು ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ. ಅಲ್ಲಿ ಇದೇ ರೀತಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇಲ್ಲಿ ಹೆಚ್ಚಿನ ಮತ ನೀಡಿ ಗೆಲ್ಲಿಸಿ ಎಂದ ಅವರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬಗ್ಗೆ ಟೀಕೆ ಮಾಡುವ ನೈತಿಕ ಹಕ್ಕು ಯಾರಿಗೂ ಇಲ್ಲ ಯಾರೂ ಕೂಡ ಮಾಡಬಾರದು ಎಂದರು.
ಹರದನಹಳ್ಳಿ ವಿಜಯ್ ಕುಮಾರ್ ಸರಳ ಸಜ್ಜನಿಕೆಯ ವ್ಯಕ್ತಿ ಇಂತಹ ವ್ಯಕ್ತಿಗಳು ರಾಜಕೀಯಕ್ಕೆ ಬರಬೇಕು ಬಡವರ ರೈತರ ಮೇಲೆ ಹೆಚ್ಚು ಕಾಳಜಿ ಇರುವ ಮುಂದಿನ ದಿನಗಳಲ್ಲಿ ವಿಧಾನ ಸೌಧಕ್ಕೆ ಪ್ರವೇಶ ಮಾಡುವುದು ಖಚಿತ ಎಂದು ಭವಿಷ್ಯ ನುಡಿದರು. ಇವರ ನೇತೃತ್ವದಲ್ಲಿ ಈ ಭಾಗದ ಹೆಚ್.ಡಿ.ಕೆ ಪರ ಚುನಾವಣಾ ಪ್ರಚಾರ ನಡೆಸಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದರು.
ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಮಿರ್ಲೇ ಅಣ್ಣೇಗೌಡ, ಮಾಜಿ ಮೂಡ ಅಧ್ಯಕ್ಷ ಹರದನಹಳ್ಳಿ ವಿಜಯ್‍ಕುಮಾರ್, ಮಾಜಿ ಜಿಪಂ ಸದಸ್ಯ ಎಂ.ಟಿ.ಕುಮಾರ್, ಮಾಜಿ ಮೈಮುಲ್ ಅಧ್ಯಕ್ಷ ಎ.ಟಿ.ಸೋಮಶೇಖರ್, ಜಿಪಂ ಮಾಜಿ ಸದಸ್ಯ ಅಮಿತ್ ದೇವರಹಟ್ಟಿ, ಸವಿತಾವಿಜಯ್‍ಕುಮಾರ್, ತಾ.ಕಸಾಪ ಅಧ್ಯಕ್ಷ ಮಧುಚಂದ್ರ, ತಾ.ಜೆಡಿಎಸ್ ವಕ್ತಾರ ರಮೇಶ್, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸೋಮಣ್ಣ. ಜಿಲ್ಲಾ ಯೂನಿಯನ್ ಬ್ಯಾಂಕ್ ನಿರ್ದೇಶಕ ರಾಮೇಗೌಡ, ಜೆಡಿಎಸ್ ಮುಖಂಡರಾದ ಮಿರ್ಲೆ ರಾಜೀವ್, ರಾಜೇಶ್, ನಿಂಗಪ್ಪ, ಅನಂತ್, ಮುದುಗುಪ್ಪೆ ಕುಮಾರ್, ಸತೀಶ್, ಕೃಷ್ಣೇಗೌಡ, ರವಿ, ಅಂಕನಹಳ್ಳಿಶಿವಣ್ಣ, ಮಹೇಶ್, ಗೊಪಾಲ್, ಮೈಸೂರುಚಂದ್ರಣ್ಣ ಪ್ರದೀಪ್, ಮಂಜು ಸೇರಿದಂತೆ ಇನ್ನಿತರರು ಹಾಜರಿದ್ದರು.