ನೀವು ನೀಡುವ ಮತ ಹೆಚ್.ಡಿ.ಕೆ ಮಂತ್ರಿ ಮಾಡುತ್ತದೆ: ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.24: ನೀವು ನೀಡುವ ಮತಗಳು ಪ್ರಧಾನಿ ನರೇಂದ್ರಮೋದಿ ಸಂಪುಟದಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ಮಂತ್ರಿ ಮಾಡುತ್ತದೆ. ಆ ಮೂಲಕ ಜಿಲ್ಲೆ, ರಾಜ್ಯ ಅಭಿವೃದ್ದಿಯಾಗುತ್ತದೆ. ಆದ್ದರಿಂದ ತಪ್ಪದೇ ಮೈತ್ರಿ ಅಭ್ಯರ್ಥಿ ಮಾಜಿ ಸಿ.ಎಂ ಕುಮಾರಸ್ವಾಮಿಯವರಿಗೆ ಮತ ನೀಡಿ ಎಂದು ಶಾಸಕ ಹೆಚ್.ಟಿ.ಮಂಜು ಮನವಿ ಮಾಡಿದರು.
ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ಶೆಟ್ಟಿನಾಯಕನಕೊಪ್ಪಲು, ಸಿಂಧುಘಟ್ಟ, ಮರುವನಹಳ್ಳಿ, ರಾಯಸಮುದ್ರ, ಕ್ಯಾತನಹಳ್ಳಿ, ಉಯ್ಗೋನಹಳ್ಳಿ, ಬಿಲ್ಲೇನಹಳ್ಳಿ,, ಬೇಲದಕೆರೆ, ಕಾಗೇಪುರ, ಶೀಳನೆರೆ ಸೇರಿದಂತೆ ಹಲವಾರು ಗ್ರಾಮಗಳಿಗೆ ತೆರಳಿ ಕುಮಾರಸ್ವಾಮಿಯವರ ಪರ ಮತಯಾಚನೆ ಮಾಡಿದರು.
ತಾಲ್ಲೂಕಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಯವರ ಬಗ್ಗೆ ಅತೀವ ಪ್ರೀತಿ ಇದೆ ಎಲ್ಲಾ ಕಡೆಗಳಲ್ಲಿಯೂ ಕುಮಾರಣ್ಣನಿಗೆ ಮತ ಚಲಾಯಿಸಲು ಮತದಾನದ ದಿನವನ್ನು ಎದುರುನೋಡುತ್ತಿದ್ದಾರೆ. ಬಡವರ, ರೈತರ, ಜನಪರ ಕಾಳಜಿಯುಳ್ಳ ಕುಮಾರಣ್ಣನಿಗೆ ಮತ ನೀಡುವ ಮೂಲಕ ಅವರನ್ನು ಕೇಂದ್ರದಲ್ಲಿ ಮಂತ್ರಿಯನ್ನಾಗಿ ಮಾಡುತ್ತವೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುತ್ತವೆ. ಆ ಮೂಲಕ ದೇಶ ಅಭಿವೃದ್ದಿಯಾಗಲಿದೆ. ದೇವೇಗೌಡ ಅಪ್ಪಾಜಿಯವರ ದೂರದೃಷ್ಟಿಯಿಂದಾಗಿ ಹುರುಳಿಕಾಳು ಬೆಳೆಯುತ್ತಿದ್ದ ನಮ್ಮ ತಾಲ್ಲೂಕಿನಲ್ಲಿ ಹೇಮಾವತಿ ನೀರು ಬಳಸಿಕೊಂಡು ಅನ್ನ ಬೆಳೆಯುವಂತೆ ಮಾಡಿದ್ದಾರೆ. ತಾಲ್ಲೂಕಿಗೆ ಮಿನಿವಿಧಾನಸೌಧ,ಬಸ್ ಡಿಪೆÇೀ, ಇಂಜಿನಿಯರಿಂಗ್ ಕಾಲೇಜು, ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ, ಶಾಲಾ ಕಾಲೇಜುಗಳು, ಸೇರಿದಂತೆ ಹಲವು ಅಭಿವೃದ್ದಿ ಕೆಲಸಗಳಾಗಿದ್ದು ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರು ಕೇಂದ್ರ ಮಂತ್ರಿಯಾಗಿ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಡಿಸುವ ಮೂಲಕ ರಾಜ್ಯದ ಹಾಗೂ ಜಿಲ್ಲೆಯ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ.
ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕುಮಾರಣ್ಣನವರು ಸಂಕಷ್ಟದಲ್ಲಿದ್ದ ಕೊಬ್ಬರಿ ಬೆಳೆಗಾರ ಸಮಸ್ಯೆಗೆ ಸ್ಪಂದಿಸಿ ಕೇಂದ್ರ ಕೃಷಿ ಸಚಿವರನ್ನು ಭೇಟಿಮಾಡಿ ನಫೆಡ್ ಮೂಲಕ ಕೊಬ್ಬರಿ ಖರೀದಿ ಮಾಡುವಂತೆ ಕ್ರಮ ಕೈಗೊಂಡಿದ್ದಾರೆ. ದೇವೇಗೌಡ ಅಪ್ಪಾಜಿಯವರು 91ರ ವಯಸ್ಸಿನಲ್ಲಿಯೂ ಸಂಸತ್ತಿನಲ್ಲಿ ಕನ್ನಡ ನಾಡಿನ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಪರಿಹಾರ ಕೊಡಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮೇಕೆದಾಟು, ಕಾವೇರಿ ನೀರಿನ ಸಮಸ್ಯೆ, ಮಹದಾಯಿ ಸೇರಿದಂತೆ ಅನೇಕ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಬೇಕಾಗಿದ್ದು ಇದಕ್ಕಾಗಿ ನಾವೆಲ್ಲರೂ ಕುಮಾರಣ್ಣನಿಗೆ ಮತ ನೀಡುವ ಮೂಲಕ ಸಹಕಾರ ನೀಡಬೇಕಿದೆ. ಪ್ರಧಾನಿ ನರೇಂದ್ರಮೋದಿ ಕಳೆದ ಹತ್ತು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಮೂಲಕ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತ ಖಾಯಂ ಸ್ಥಾನ ಪಡೆಯುವತ್ತ ಮಹತ್ವದ ಹೆಜ್ಜೆ ಇಡುತ್ತಿದ್ದು ಅಖಂಡ ಭಾರತೀಯರ ಬಹಳ ವರ್ಷಗಳ ಕನಸು ನನಸಾಗಲಿದೆ.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದೆ. 10 ರೂಪಾಯಿಯ ಪಹಣಿಯನ್ನು 25 ರೂಪಾಯಿಗೆ ಏರಿಸಲಾಗಿದೆ. ರೈತರು ಜಮೀನು ಖರೀದಿಸಿದರೆ ನೊಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ವಿಪರೀತ ಏರಿಕೆ ಮಾಡಿ ಸುಲಿಗೆ ಮಾಡಲಾಗುತ್ತಿದೆ. ಹಾಲಿನ ದರ ಹೆಚ್ಚಳ, ವಿದ್ಯುತ್ ದರ ಹೆಚ್ಚಳ, ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುತ್ತಿದ್ದ ಪೆÇ್ರೀತ್ಸಾಹಧನ ರದ್ದು, ಕಂದಾಯ ಇಲಾಖೆಯಲ್ಲಿ ವಿವಿಧ ಪ್ರಮಾಣ ಪತ್ರಗಳ ಬೆಲೆ ಹೆಚ್ಚಳ, ಬಡವರು ಶ್ರಮಿಕರು ಕುಡಿಯುವ ಮದ್ಯದ ಬೆಲೆ ವಿಪರೀತ ಏರಿಕೆ, ಭಾಗ್ಯಲಕ್ಷ್ಮಿ ಯೋಜನೆ ರದ್ದು, ಕೃಷಿಕರು ಟಿಸಿ ಹಾಕಿಸಿಕೊಳ್ಳಲು ಅಧಿಕ ಹಣ ತೆರಬೇಕಾಗಿರುವುದು, ಕೃಷಿ ಸಮ್ಮಾನ್ ಹಣ ನಿಲುಗಡೆ, 1.05 ಲಕ್ಷ ಕೋಟಿ ಸಾಲ ಮಾಡುವ ಮೂಲಕ ಬಡವರು, ಮದ್ಯಮವರ್ಗದವರಿಗೆ, ರೈತರಿಗೆ ಅನ್ಯಾಯ ಮಾಡಿ ಗ್ಯಾರಂಟಿ ಯೋಜನೆಗೆ ಹಣ ಒದಗಿಸಲಾಗುತ್ತಿದೆ. ಅಭಿವೃದ್ದಿ ಕೆಲಸಗಳಿಗೆ ಹಣ ನೀಡದೇ ಸಬೂಬು ಹೇಳುತ್ತಿರುವುದೇ ಸರ್ಕಾರದ ಸಾಧನೆ ಎಂದು ತಿಳಿಸಿದರು.
ಮತಯಾಚನೆ ಸಮಯದಲ್ಲಿ ರಾಜ್ಯ ಮಾರಾಟ ಮಹಾಮಂಡಳಿಯ ನಿರ್ದೇಶಕ ಎಸ್.ಎಲ್.ಮೋಹನ್, ಸಿಂಧಘಟ್ಟ ಗ್ರಾಪಂ ಅದ್ಯಕ್ಷೆ ದಿವ್ಯಗಿರೀಶ್, ಗ್ರಾಪಂ ಸದಸ್ಯರಾದ ಆಶಾಸೋಮಶೇಖರ್, ನಾಗೇಶ್, ಕುಮಾರ್, ಬೇಲದಕೆರೆನಂಜಪ್ಪ, ಬೈರಾಪುರಹರೀಶ್,ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.