ಕೇಂದ್ರಕ್ಕೆ ಸುಪ್ರೀಂ ಚಾಟಿ; ಅಜಯ್ ಸಿಂಗ್ ಸಂತಸ
ಕಲಬುರಗಿ,ಏ 23: ಕರ್ನಾಟಕಕ್ಕೆ ಬರ ಪರಿಹಾರ ನೀಡುವ ವಿಚಾರದಲ್ಲಿ ತಾರತಮ್ಯ ತೋರಿದ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿ, ಒಂದು ವಾರದೊಳಗೆ ಬರ ಪರಿಹಾರ ಬಿಡುಗಡೆಗೊಳಿಸಲು ಸೂಚನೆ ನೀಡಿರುವುದು ರಾಜ್ಯದ ಜನತೆಗೆ ಸಿಕ್ಕ ಗೆಲುವಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದರು.
ಇಂದು ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ 236 ತಾಲೂಕಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಹಾಗೂ 196 ತಾಲೂಕುಗಳನ್ನು ತೀವ್ರ ಬರ ಪೀಡಿತ ಎಂದು ರಾಜ್ಯ ಸರಕಾರ ಘೋಷಿಸಿ ಕೇಂದ್ರಕ್ಕೆ ಸೆ. 22, 2023 ಎಂದು ವರದಿ ಸಲ್ಲಿಸಿತ್ತು. ನಂತರ 10 ಸದಸ್ಯರ ಕೇಂದ್ರದ ತಂಡ ಅ.5 ಹಾಗೂ 9ರಂದು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿತ್ತು. ಆ ನಂತರ, ರಾಜ್ಯದ ಮತ್ತೆ 21 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಹೆಚ್ಚುವರಿ ಮನವಿಯನ್ನು ಅಕ್ಟೋಬರ್ 9ರಂದು ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಈ ಎಲ್ಲ ವರದಿಗಳ ಆಧಾರದ ಮೇಲೆ ಈಗ ಬರಗಾಲದ ಪರಿಹಾರ ನೀಡಲು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಆದೇಶ ನೀಡಿದೆ ಎಂದರು.
ಕಾಂಗ್ರೆಸ್ ಸರಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸೌಹಾರ್ದತೆಯಿಂದ ಕಾರ್ಯನಿರ್ವಹಿಸಬೇಕು. ಒಂದು ವಾರದೊಳಗೆ ಬರ ಪರಿಹಾರ ನೀಡಬೇಕು ಎಂದು ಸೂಚಿಸಿದೆ. ನ್ಯಾಯಾಲಯದ ಈ ತೀರ್ಪು ಬರಗಾಲದಿಂದ ಕಂಗೆಟ್ಟಿರುವ, ನೊಂದಿರುವ ರಾಜ್ಯದ ಜನತೆ, ರೈತರಿಗೆ ಸಿಕ್ಕ ಬಹುದೊಡ್ಡ ಜಯವಾಗಿದೆ ಎಂದು ವ್ಯಾಖ್ಯಾನಿಸಿದರು.
ಕರ್ನಾಟಕಕ್ಕೆ ಬರಗಾಲ ಪರಿಹಾರದಲ್ಲಿ ಮಾತ್ರವಲ್ಲದೆ ತೆರಿಗೆ ಹಣ ಮರಳಿ ಬರುವ ವಿಚಾರದಲ್ಲಿಯೂ ಬಾರಿ ಅನ್ಯಾಯವಾಗುತ್ತಿದೆ. ಕರ್ನಾಟಕ ಪ್ರತಿ ವರ್ಷ 4 ಲಕ್ಷ 75 ಸಾವಿರ ಕೋಟಿ ರೂ. ತೆರಿಗೆ ಕೇಂದ್ರಕ್ಕೆ ಕಟ್ಟುತ್ತಿದೆ. ಆದರೆ, ನಮಗೆ ಕೇವಲ 52 ಸಾವಿರ ಕೋಟಿ ರೂ. ಮಾತ್ರ ವಾಪಸ್ ನೀಡಿ ಅನ್ಯಾಯ ಮಾಡಿದೆ. ನಮ್ಮ ತೆರಿಗೆ, ನಮ್ಮ ಹಕ್ಕು ಎಂದು ಎಲ್ಲರೂ ದಿಲ್ಲಿಯಲ್ಲಿ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದೇವೆ. ಬರುವ ದಿನಗಳಲ್ಲಿ ಈ ವಿಚಾರದಲ್ಲಿಯೂ ಕೇಂದ್ರ ಸರಿಯಾಗಿ ವರ್ತಿಸಲಿ, ರಾಜ್ಯದ ತೆರಿಗೆ ಪಾಲು ಸಂಪೂರ್ಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರಧಾನಿ ಮೋದಿ ಅವರು ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಬರುತ್ತಾರೆ. ಚುನಾವಣೆ ಆದಮೇಲೆ ಇತ್ತ ಪ್ರಧಾನಿ ಮೂಸಿ ಸಹ ನೋಡುವುದಿಲ್ಲ. ಕಲ್ಯಾಣ ಕರ್ನಾಟಕ ಎನ್ನುವ ಹೆಸರು ಬದಲಾವಣೆ ಮಾಡಿದ್ದು ಬಿಟ್ಟರೆ, ಕಲ್ಯಾಣ ಕರ್ನಾಟಕ ಕೇಂದ್ರ ಸರಕಾರ ಏನೂ ಕೊಟ್ಟಿಲ್ಲ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ್ ಗುತ್ತೇದಾರ, ಶಾಸಕ ಅಲ್ಲಮಪ್ರಭು ಪಾಟೀಲ್, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್ ರೆಡ್ಡಿ, ಹಿರಿಯ ಮುಖಂಡ ಅಲ್ಲಮ ವೀರಭದ್ರಪ್ಪ, ನೀಲಕಂಠರಾವ್ ಮೂಲಗೆ, ಮಹಾತೇಶ್ ಕೌಲಗಿ, ಶರಣು ಭೂಸನೂರ್, ಈರಣ್ಣ ಝಳಕಿ ಸೇರಿ ಅನೇಕರು ಇದ್ದರು.
ಕಾಂಗ್ರೆಸ್ ಪರ ಜನರ ಒಲವು
ಜಿಲ್ಲೆಯಲ್ಲಿ ಜನರು ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರ ಅಲೆಯಿದೆ. ಪ್ರತಿ ಹಳ್ಳಿಯಲ್ಲೂ ಜನರು ಸ್ವಇಚ್ಛೆಯಿಂದ ಮಹಿಳೆಯರು, ಯುವಕರು ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುತ್ತಿದ್ದಾರೆ. 2009ರ ಚುನಾವಣೆಯಲ್ಲಿ ಇದ್ದ ಅಲೆ ಮತ್ತೊಮ್ಮೆ ಕಾಂಗ್ರೆಸ್ ಪರ ಶುರುವಾಗಿದೆ. ಹೀಗಾಗಿ ಕಲಬುರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಗೆಲುವು ಶೇ.100ರಷ್ಟು ಖಚಿತ ಎಂದು ಡಾ.ಅಜಯ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದg
ರೈತ ವಿರೋಧಿ ಕೇಂದ್ರ ಸರಕಾರ
ಕೇಂದ್ರದಲ್ಲಿ ರೈತ ವಿರೋಧಿ ಸರಕಾರವಿದೆ. ದೇಶದಲ್ಲಿ ಕಳೆದ ಹತ್ತು ವರ್ಷದಲ್ಲಿ ಸುಮಾರು 1 ಲಕ್ಷ 474 ರೈತರ ಆತ್ಮಹತ್ಯೆ ಆಗಿದೆ. ಸ್ವಾಮಿನಾಥನ್ ಆಯೋಗ ಜಾರಿಗೊಳಿಸುತ್ತೇವೆ ಎಂದು ರೈತರಿಗೆ ಸುಳ್ಳು ಹೇಳಿದೆ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿ, ರೈತರ ಮೇಲೆ ಗೋಲಿಬಾರ್ ಮಾಡಿದ್ದಾರೆ. ಟ್ರ್ಯಾಕ್ಟರ್ ಹತ್ತಿಸಿದ್ದಾರೆ. ಜತೆಗೆ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿ ಸಾಲ ಮನ್ನಾ ಮಾಡಿಲ್ಲ. ಬಡವರ ಸಾಲ ಮನ್ನಾ ಮಾಡದೆ, ಉದ್ಯಮಿಗಳ 14 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುವ ಮೂಲಕ ರೈತ ವಿರೋಧಿ ನೀತಿ ಅನುಸರಿಸಿದೆ. ಮೋದಿ ಸರಕಾರ ರೈತರಿಗೆ ಏನೂ ನೀಡಿಲ್ಲ. ಆದರೆ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 22 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿ, 6 ಕೋಟಿ ರೈತರಿಗೆ ಅನುಕೂಲ ಮಾಡಿತ್ತು. ಜತೆಗೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 27 ಲಕ್ಷ ರೈತರಿಗೆ ಅನುಕೂಲವಾಗಲು 6 ಕೋಟಿ ರೂ. ಸಾಲ ಮನ್ನಾ ಮಾಡಿ ಕಾಂಗ್ರೆಸ್ ಸರಕಾರ ರೈತರ ಬೆನ್ನಿಗೆ ನಿಂತಿದೆ ಎಂದು ಅಜಯ್ ಸಿಂಗ್ ಹೇಳಿದರು.
ಪ್ರಧಾನಿ ಮೋದಿ ಅವರಿಗೆ ಈಗಾಗಲೇ ಸೋಲಿನ ಭೀತಿ ಕಾಡುತ್ತಿದೆ. ಹಾಗಾಗಿ, ಅವರು ಹತಾಶರಾಗಿದ್ದಾರೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ, ನಿಮ್ಮ ಕುತ್ತಿಗೆಯಲ್ಲಿ ಮಂಗಳಸೂತ್ರ ಇರಲು ಬಿಡುವುದಿಲ್ಲ ಎನ್ನುವ ಪ್ರಧಾನಿ ಮಾತು ಅವರ ಆತಂಕವನ್ನು ಧ್ವನಿಸುವಂತಿದೆ. ಆ ಮೂಲಕ ಹಿಂದೂ-ಮುಸಲ್ಮಾನರ ನಡುವೆ ಜಗಳ ಹಚ್ಚುವ ಮೂಲಕ ಚುನಾವಣೆ ನಡೆಸಲು ಪ್ರಧಾನಿ ಮುಂದಾಗಿದ್ದಾರೆ.
-ಡಾ. ಅಜಯ್ ಸಿಂಗ್, ಅಧ್ಯಕ್ಷ, ಕೆ.ಕೆ.ಆರ್.ಡಿ.ಬಿ