ನೇಹಾ‌ ಹತ್ಯೆ ಖಂಡಿಸಿ ಡಿಎಸ್ಎಸ್ – ಎಸ್ ಎಫ್ ಐ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಜಗಳೂರು.ಏ.೨೩ – ಹುಬ್ಬಳ್ಳಿ ನಗರದ ನೇಹಾ ಹಿರೇಮಠ್ ವಿದ್ಯಾರ್ಥಿನಿಯನ್ನು ಹತ್ಯೆಗೈದ ಫಯಾಜ್ ನನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ  ದಲಿತ ಸಂಘರ್ಷ ಸಮಿತಿ, ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಭಾರತ ವಿದ್ಯಾರ್ಥಿ ಫೆಡರೇಶನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಗಾಂಧಿ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು ವಿವಿಧ ಘೋಷಣೆಗಳನ್ನು ಕೂಗುತ್ತ ತಾಲೂಕು ಕಛೇರಿಗೆ ತೆರಳಿ ತಹಶೀಲ್ದಾರ್ ಚಂದ್ರಶೇಖರ್ ನಾಯ್ಕರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಎಸ್.ಎಫ್.ಐ ಜಿಲ್ಲಾ ಸಂಚಾಲಕ ಅನಂತರಾಜ್ ಮಾತನಾಡಿ, ಹುಬ್ಬಳ್ಳಿಯ ಬಿ ವಿ ಕಾಲೇಜ್ ಆವರಣದಲ್ಲಿ  ಬಿವಿಬಿಕಾಲೇಜ್ ವಿದ್ಯಾರ್ಥಿನಿ ನೇಹಾ ಹಿರೇಮಠ್ ರವರ ಹತ್ಯೆಯು ಇಡೀ ದೇಶವೇ ಬೆಚ್ಚಿ ಬೀಳುವ ಹಾಗೂ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ. ಈ ದುರ್ಘಟನೆಯಿಂದ ವಿದ್ಯಾರ್ಥಿ ಸಮೂಹ ಭಯದ ವಾತಾವರಣದಲ್ಲಿದೆ. ಭವಿಷ್ಯದಲ್ಲಿ ಜೀವನದ ಬಗ್ಗೆ ಆಸೆ ಗುರಿ ಕನಸುಗಳನ್ನು ಹೊತ್ತಿದ್ದ ನೇಹಾ ಹಿರೇಮಠ್ ಎಂಬ ವಿದ್ಯಾರ್ಥಿನಿಯನ್ನು ಹಾಡಾಗಲೇ ಕಾಲೇಜ್ ಆವರಣದಲ್ಲಿ ಕೊಲೆ ಮಾಡುವ ಹಂತಕ್ಕೆ ಫಯಾಜ್ ಮುಂದಾಗಿರುವುದು ಹೀನಾಯ ಸಂಗತಿ. ರಾಜ್ಯದಲ್ಲಿ ಇಂತಹ ಮನಸ್ಥಿತಿಯವರಿಗೆ ರಾಜ್ಯ ಸರ್ಕಾರ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ. ಆದ್ದರಿಂದ ವಿದ್ಯಾರ್ಥಿಯನ್ನು ಹತ್ಯೆಗೈದ ಫಯಾಜ್ ನನ್ನು ಯಾವುದೇ ನ್ಯಾಯಾಲಯ ವಿಚಾರಣೆ ಎಂದು ಸಮಯವನ್ನು ವ್ಯರ್ಥ ಮಾಡದೆ ಅತಿ ಶೀಘ್ರದಲ್ಲಿ ಗಲ್ಲಿಗೇರಿಸಬೇಕು, ಅಥವಾ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶಾಲಾ ಕಾಲೇಜುಗಳಲ್ಲಿ ಸೂಕ್ತ ಭದ್ರತೆಯನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕು ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಶಾಲಾ ಕಾಲೇಜುಗಳಲ್ಲಿ ಸಭೆಗಳನ್ನು ಆಯೋಜಿಸಬೇಕು. ಇಂತಹ ಘಟನೆಗಳನ್ನು ರಾಜಕೀಯ ಮತ್ತು ಮತೀಯ ಹಿನ್ನೆಲೆಯಲ್ಲಿ ನೋಡುವ ಬದಲಾಗಿ ರಾಜ್ಯದ ಜನತೆ ಒಗ್ಗಟ್ಟಾಗಿ ನಿಂತು ನರಹಂತಕ ಫಯಾಜ್ ನಿಗೆ ಕಠಿಣ ಶಿಕ್ಷೆ ಕೊಡಿಸುವುದಕ್ಕೆ ಹೋರಾಟ ಮಾಡಬೇಕು ವಿನಃ ಇದರಿಂದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು. ಸರ್ಕಾರವು ನೇಹಾಳ ಹತ್ಯೆಯಿಂದ ನೊಂದಿರುವ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಹಾಗೂ ಭದ್ರತೆಯನ್ನು ಒದಗಿಸಬೇಕು. ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ರಕ್ಷಣೆಗಾಗಿ ಸೂಕ್ತ ಕಾನೂನು ನಿಯಮಾವಳಿಗಳನ್ನು ಪಾಲಿಸಿ ಜಾರಿಗೊಳಿಸಬೇಕು. ಶಾಲಾ ಕಾಲೇಜು ಆವರಣಗಳಲ್ಲಿ ಸಿಸಿ ಕ್ಯಾಮೆರಾ ಮತ್ತು ಭದ್ರತಾ ಸಿಬ್ಬಂದಿಗಳನ್ನು ಸಮರ್ಪಕವಾಗಿ ಆಯೋಜಿಸುವಂತೆ ಕಾಲೇಜ್ ಮುಖ್ಯಸ್ಥರಿಗೆ ಸೂಕ್ತ ಮಾರ್ಗದರ್ಶನಗಳನ್ನು ನೀಡಬೇಕು. ಈ ವಿಕೃತ ಮನಸ್ಥಿತಿಯ ಫಯಾಜ್ ನನ್ನು ಶೀಘ್ರದಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಿ ರಾಜ್ಯದಲ್ಲಿ ಕಾನೂನು ವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು. ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದೆ ನಿರ್ಲಕ್ಷ್ಯ ಮಾಡಿದ್ದಲ್ಲಿ ರಾಜ್ಯದಾದ್ಯಂತ ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.