ಶಿವಮೊಗ್ಗದಲ್ಲಿ ಬಿಜೆಪಿ ಕಾಂಗ್ರೆಸ್‌ಗೆ ಈಶ್ವರಪ್ಪ ಬಂಡಾಯ:ಸ್ಪರ್ಧೆ ಕುತೂಹಲಕ್ಕೆಡೆ
ಶಿವಮೊಗ್ಗ, ಏ. ೨೩: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ಕಾವೇರಿದೆ. ಕೊನೆಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನಾಮಪತ್ರ ವಾಪಾಸ್ ಪಡೆದಿಲ್ಲ. ಅಖಾಡದಲ್ಲಿ ಉಳಿಯುವ ಮೂಲಕ, ಬಿಜೆಪಿ ಅಭ್ಯರ್ಥಿಗೆ ಸಡ್ಡು ಹೊಡೆದಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ‘ಬಂಡಾಯ ರಾಜಕೀಯ’ ಲೆಕ್ಕಾಚಾರ ಜೋರಾಗಿದೆ.
ಚುನಾವಣಾ ಕಣದಿಂದ ಕೆ.ಎಸ್.ಈಶ್ವರಪ್ಪರನ್ನ ಹಿಂದಕ್ಕೆ ಸರಿಸಲು, ಬಿಜೆಪಿ ಹೈಕಮಾಂಡ್ ಸಾಕಷ್ಟು ಕಸರತ್ತು ನಡೆಸಿತ್ತು. ಆದರೆ ಇವ್ಯಾವುದಕ್ಕೂ ಈಶ್ವರಪ್ಪ ತಲೆಬಾಗಿರಲಿಲ್ಲ. ಸ್ಪರ್ಧೆ ನಿಶ್ಚಿತ. ಯಾವುದೇ ಕಾರಣಕ್ಕೂ ನಾಮಪತ್ರ ಹಿಂದಕ್ಕೆ ಪಡೆಯುವುದಿಲ್ಲ ಎಂದಿದ್ದರು.
ಈ ಕಾರಣದಿಂದ ಇತ್ತೀಚೆಗೆ ಬಿಜೆಪಿ ಕೂಡ ಕೆಎಸ್‌ಇ ಮನವೊಲಿಸುವ ಕಾರ್ಯ ಸ್ಥಗಿತಗೊಳಿಸಿತ್ತು. ಆದಾಗ್ಯೂ ನಾಮಪತ್ರ ಹಿಂಪಡೆಯ ಗಡುವು ಪೂರ್ಣಗೊಳ್ಳುವವರೆಗೆ ಕಾದು ನೋಡಲು ನಿರ್ಧರಿಸಿತ್ತು. ಅವರು ಏನೇ ಆರೋಪ, ಟೀಕೆ-ಟಿಪ್ಪಣಿ ಮಾಡಿದರೂ ಬಿಜೆಪಿ ನಾಯಕರು ಪ್ರತ್ಯಾರೋಪದ ಗೋಜಿಗೆ ಹೋಗಿರಲಿಲ್ಲ.
ಇದೀಗ ಈಶ್ವರಪ್ಪ ಪಕ್ಷೇತರರಾಗಿ ಸ್ಪರ್ಧಿಸುವುದು ಖಚಿತವಾಗಿದೆ. ಈ ಕಾರಣದಿಂದ ಅವರ ವಿರುದ್ದ ರಾಜಕೀಯ ತಂತ್ರಗಾರಿಕೆ ಆರಂಭಿಸಲು ಬಿಜಪಿ ಮುಂದಾಗಿದೆ. ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದರ ಜೊತೆಗೆ, ಟೀಕೆಗಳಿಗೆ ತಕ್ಕ ತಿರುಗೇಟು ನೀಡಲು ನಿರ್ಧರಿಸಿದೆ ಎಂಬ ಮಾಹಿತಿಗಳು ಆ ಪಕ್ಷದ ಉನ್ನತ ಮೂಲಗಳು ತಿಳಿಸುತ್ತವೆ.
ಬಂಡಾಯದ ಬಿಸಿ : ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರವರು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಸವಾಲಿನ ಜೊತೆಯಲ್ಲಿ,ಈಶ್ವರಪ್ಪ ಬಂಡಾಯ ಎದುರಿಸಬೇಕಾಗಿದೆ. ಬಿವೈಆರ್ ಈ ಹಿಂದೆ ಎದುರಿಸಿದ ಮೂರು ಚುನಾವಣೆಗಳಿಗೆ ಹೋಲಿಸಿದರೆ, ಪ್ರಸ್ತುತ ಎಲೆಕ್ಷನ್ ನಲ್ಲಿ ಅವರಿಗೆ ಎಡರುತೊಡರು ಎದುರಾಗುವಂತಾಗಿದೆ.
ನಿರ್ಣಾಯಕ : ಪಕ್ಷೇತರವಾಗಿ ಕಣಕ್ಕಿಳಿದಿರುವ ಕೆಎಸ್‌ಇಗೆ, ಪ್ರಸ್ತುತ ಚುನಾವಣೆಯು ಅತ್ಯಂತ ಮಹತ್ವದ್ದಾಗಿದೆ. ಅವರ ರಾಜಕೀಯ ಜೀವನದಲ್ಲಿ ನಿರ್ಣಾಯಕವಾಗಿದೆ. ಹಾಗೆಯೇ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರರಿಗೂ ಅಗ್ನಿ ಪರೀಕ್ಷೆಯಾಗಿದೆ. ಇದೆಲ್ಲದರ ನಡುವೆ ಬಿಜೆಪಿ ಬಂಡಾಯದ ಲಾಭದ ‘ಗ್ಯಾರಂಟಿ’ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ್ದಾಗಿದೆ.
ಒಟ್ಟಾರೆ ಪ್ರಸ್ತುತ ಚುನಾವಣೆಯಲ್ಲಿಯೂ ಶಿವಮೊಗ್ಗ ಲೋಕಸಭಾ ಕ್ಷೇತ್ರ ಮತ್ತೊಮ್ಮೆ ರಾಷ್ಟ್ರ, ರಾಜ್ಯದ ಗಮನ ಸೆಳೆದಿದೆ. ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆಯಾಗುತ್ತಿದ್ದು, ಇದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.
೨೩ ಅಭ್ಯರ್ಥಿಗಳು ಕಣದಲ್ಲಿ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ, ಅಂತಿಮವಾಗಿ ೨೩ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಏ. ೨೨ ರ ಸೋಮವಾರ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿತ್ತು.
ವಿವರ : ಬಿಜೆಪಿ ಪಕ್ಷದಿಂದ ಬಿ.ವೈ.ರಾಘವೇಂದ್ರ, ಕಾಂಗ್ರೆಸ್ ಪಕ್ಷದಿಂದ ಗೀತಾ ಶಿವರಾಜ್‌ಕುಮಾರ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಎಸ್.ಕೆ.ಪ್ರಭು, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಿ ಅರುಣ ಕೆ.ಎ, ಬಹುಜನ ಸಮಾಜ ಪಾರ್ಟಿಯಿಂದ ಎ.ಡಿ.ಶಿವಪ್ಪ,
ಯಂಗ್‌ಸ್ಟರ್ ಎಂಪರ್‍ಮೆಂಟ್ ಪಾರ್ಟಿಯಿಂದ ಯೂಸುಫ್ ಖಾನ್, ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಎಸ್.ಈಶ್ವರಪ್ಪ, ರವಿಕುಮಾರ್ ಎಸ್, ಶಿವರುದ್ರಯ್ಯ ಸ್ವಾಮಿ, ಹೆಚ್ ಸುರೇಶ್ ಪೂಜಾರಿ,
ಚಂದ್ರಶೇಖರ್ ಹೆಚ್.ಸಿ, ಜಾನ್ ಬೆನ್ನಿ, ಪಿ.ಶ್ರೀಪತಿ, ರವಿಕುಮಾರ್ ಎನ್, ಪೂಜಾ ಅಣ್ಣಯ್ಯ, ಇಂತಿಯಾಜ್ ಎ.ಅತ್ತಾರ್, ಸಂದೇಶ್ ಶೆಟ್ಟಿ ಎ, ಬಂಡಿ ರಂಗನಾಥ ವೈ.ಆರ್, ಹನುಮಂತಪ್ಪ, ಜಿ.ಜಯದೇವ, ಎನ್.ವಿ.ನವೀನ್ ಕುಮಾರ್, ಗಣೇಶ್.ಬಿ, ಕುಣಜೆ ಮಂಜುನಾಥ ಗೌರ ರವರು ಅಂತಿಮವಾಗಿ ಕಣದಲ್ಲಿದ್ದಾರೆ.