ಸ್ತ್ರೀವಾದಿ ಚಳವಳಿಯ ನೈಜ ಪ್ರತಿಪಾದಕಿ ಅಕ್ಕಮಹಾದೇವಿ
ಕಲಬುರಗಿ:ಏ.23: ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನೈಜ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಚಿಕ್ಕ ವಯಸ್ಸಿನಲ್ಲಿಯೇ ಸಕಲ ಸುಖವನ್ನು ತ್ಯಜಿಸಿ, ಸಮಾಜಕ್ಕಾಗಿ ಸೇವೆ ಸಲ್ಲಿಸಿದ ಅಕ್ಕ ಮಹಾದೇವಿಯವರು ಬಹುಮುಖ ವ್ಯಕ್ತಿತ್ವದ ಮಹಿಳಾ ಮೇರು ಶಿಖರವಾಗಿದ್ದಾರೆಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ‘ಅಕ್ಕಮಹಾದೇವಿಯವರ ಜಯಂತಿ’ಯ ಕಾರ್ಯಕ್ರಮದಲ್ಲಿ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಅಕ್ಕ ಮಹಾದೇವಿಯವರು ಅನುಭವಿಸಿದ ಕಷ್ಟ, ತೊಂದರೆ, ಪರೀಕ್ಷೆಗಳು ಬಹಳಷ್ಟು. ಅವೆಲ್ಲವುಗಳನ್ನು ಮೆಟ್ಟಿ ನಿಂತು, ಅಪ್ರತಿಮ ಸಾಧನೆ ಮಾಡುವ ಮೂಲಕ ಮಹಿಳಾ ಕುಲಕ್ಕೆ ಶಿರೋಮಣಿಯಾಗಿದ್ದಾರೆ. ಸಮಾಜದ ಸರ್ವತೋಮುಖ ಬೆಳವಣಿಗೆಗೆ ತಮ್ಮ ಇಡಿ ಜೀವನದುದ್ದಕ್ಕೂ ಪ್ರಯತ್ನಿಸಿದ್ದಾರೆ. ಕನ್ನಡದ ಮೊದಲ ಕವಯತ್ರಿಯಾಗಿದ್ದಾರೆ. ತಮ್ಮದೇ ಆದ ಅನುಭಾವದ ವಚನಗಳನ್ನು ರಚಿಸಿ, ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಸಿದ್ದಾರೆ. ಎಲ್ಲಾ ಮಹಿಳೆಯರಿಗೆ ಆದರ್ಶಪ್ರಾಯವಾಗಿರಾಗಿದ್ದಾರೆ. ಅಕ್ಕನ ತತ್ವ, ತ್ಯಾಗ, ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದದ್ದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕರಾದ ಪ್ರಿಯಾಂಕಾ ಉಜಳಂಬಿ, ಐಶ್ವರ್ಯ ಬಿರಾದಾರ, ಪೂಜಾ ಜಮಾದಾರ, ಪ್ರಮುಖರಾದ ದಾನಮ್ಮ, ಆರತಿ, ಜಯಶ್ರೀ, ಭಾಗ್ಯಶ್ರೀ ಸೇರಿದಂತೆ ಇನ್ನಿತರರಿದ್ದರು.