ಭಾಷೆ, ಸಂಸ್ಕøತಿ ವಿಚಾರದಲ್ಲಿ ರಾಜಿಯಿಲ್ಲ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.21:- ಕರ್ನಾಟಕದಲ್ಲಿ ಕನ್ನಡವೇ ಅಗ್ರ ಭಾಷೆ. ನಾಡುನುಡಿ, ಸಂಸ್ಕøತಿ, ಭಾಷೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಇದು ಬೂಟಾಟಿಕೆಯೂ ಅಲ್ಲ. ಭಾಷೆ, ಸಂಸ್ಕøತಿ ಮೇಲಿನ ಬದ್ಧತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಜಂಟಿಯಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸುವರ್ಣ ಸಂಭ್ರಮ ಕರ್ನಾಟಕ-50: ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ, ಕರ್ನಾಟಕ ಸಾಂಸ್ಕೃತಿಕ ಮುನ್ನೋಟ: ಚಿಂತನಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇವರಾಜ ಅರಸರು 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದರು. ನಾಮಕರಣಗೊಂಡು 50 ವರ್ಷದ ಸುವರ್ಣ ಸಂಭ್ರಮವನ್ನು ಬಿಜೆಪಿ ಸರ್ಕಾರ ಮಾಡಬೇಕಿತ್ತು. ಅವರು ಮಾಡಲಿಲ್ಲ. ಹೀಗಾಗಿ ನಾನು ಸುವರ್ಣ ಸಂಭ್ರಮವನ್ನು ಬಜೆಟ್‍ನಲ್ಲೇ ಘೋಷಿಸಿ ಇದನ್ನು ಕನ್ನಡ ಜನೋತ್ಸವವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಕರ್ನಾಟಕ ಮತ್ತು ಕನ್ನಡ ಏಳು ಕೋಟಿ ಜನರ ಉಸಿರಾಗಬೇಕು. ಇಲ್ಲಿ ಬದುಕನ್ನು ಕಟ್ಟಿಕೊಂಡಿರುವ ಇತರೆ ಭಾಷಿಕರು ಕನ್ನಡ ಮಾತಾಡುವಂತಾದರೆ ಒಳ್ಳೆಯದು. ನಾವು ಯಾವ ಭಾಷೆಗೂ ದ್ವೇಷಿಗಳಲ್ಲ. ಸಾಧ್ಯವಿರುವಷ್ಟು ಭಾಷೆಗಳನ್ನೆಲ್ಲಾ ಕಲಿತರೆ ಒಳ್ಳೆಯದೆ. ಆದರೆ, ಕರ್ನಾಟಕದಲ್ಲಿ ಕನ್ನಡದ ವಾತಾವರಣ ನಿರ್ಮಿಸಿ ಕನ್ನಡವನ್ನು ಪೂರ್ತಿಯಾಗಿ ಬಳಸಬೇಕು. ಇದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿ ಎಂದರು.
ತಮಿಳುನಾಡಿನಲ್ಲಿ ತಮಿಳಿನಲ್ಲಿ, ಕೇರಳದಲ್ಲಿ ಮಲಯಾಳಂನಲ್ಲಿ, ಆಂಧ್ರದಲ್ಲಿ ತೆಲುಗಿನಲ್ಲಿ, ಮಹಾರಾಷ್ಟ್ರದಲ್ಲಿ ಮರಾಠಿಯಲ್ಲೇ ವ್ಯವಹರಿಸುತ್ತಾರೆ. ಆದg,É ನಮ್ಮಲ್ಲಿ ಕನ್ನಡ ಬಿಟ್ಟು ಅವರವರ ಭಾಷೆಯಲ್ಲೇ ಹೆಚ್ಚು ವ್ಯವಹರಿಸಲು ಉತ್ಸುಕರಾಗಿ ಉದಾರಿ ಅನ್ನಿಸಿಕೊಂಡಿದ್ದೇವೆ. ಇದು ಅಷ್ಟು ಸರಿಯಲ್ಲ. ಕನ್ನಡದ ವಾತಾವರಣ ಗಟ್ಟಿಗೊಳಿಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ಬಹುತ್ವದ ಬೀಡು:
ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಕನ್ನಡ ನಾಡು ಬಹುತ್ವದ ಬೀಡು. ಇಲ್ಲಿ ಮನುಷ್ಯ ಪ್ರೀತಿಯ ಬಹುತ್ವ ಆಚರಿಸಲ್ಪಡುತ್ತದೆ. ಆದರೆ ವಿದ್ಯಾವಂತರೇ ಬಹುತ್ವ, ಜಾತ್ಯತೀತತೆ ಕೈಬಿಟ್ಟು ತಾರತಮ್ಯ, ಕಂದಾಚಾರವನ್ನು ಆಚರಿಸುತ್ತಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.
ಬಸವಣ್ಣನವರನ್ನು ನಾವು ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿದ್ದು ಬಸವಣ್ಣನವರ ವೈಚಾರಿಕ ನಿಲುವುಗಳನ್ನು ನಾವು ಪಾಲಿಸಬೇಕು ಎನ್ನುವ ಉದ್ದೇಶದಿಂದ. ಸರ್ಕಾರಕ್ಕೆ ಕಿರೀಟ ಸಿಗುತ್ತದೆ ಎನ್ನುವ ಕಾರಣಕ್ಕೆ ಘೋಷಣೆ ಮಾಡಿದ್ದಲ್ಲ. ಬಸವಣ್ಣನ ಆಶಯಗಳು, ವಿಚಾರಗಳು, ವೈಚಾರಿಕತೆ ಯುವ ಪೀಳಿಗೆಗೆ ಹೆಚ್ಚೆಚ್ಚು ಗೊತ್ತಾಗಬೇಕು ಎಂದು ಆಶಿಸಿದರು.
ಈ ಮಣ್ಣಿನ ಕನ್ನಡ-ಕರ್ನಾಟಕ-ಬಹುತ್ವ-ವೈಚಾರಿಕತೆ ಎಲ್ಲವೂ ಸೇರಿ ಆಗಿರುವ ಕನ್ನಡತನ ರೂಪುಗೊಂಡಿದೆ. ಈ ಕನ್ನಡತನವನ್ನು, ಇದು ರೂಪುಗೊಂಡ ಚರಿತ್ರೆಯನ್ನು ನಾವು ಈ ತಲೆಮಾರಿಗೆ ದಾಟಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ಈ ಚಿಂತನಾ ಸಮಾವೇಶ ಆಯೋಜಿಸಲಾಗಿದೆ. ನಿಮ್ಮಂಥಾ ವಿಚಾರವಾದಿಗಳು ಒಟ್ಟಾಗಿ ಸೂಕ್ತವಾದ ಸಾಂಸ್ಕೃತಿಕ ಮುನ್ನೋಟ ನೀಡುತ್ತೀರಿ ಎನ್ನುವ ವಿಶ್ವಾಸವಿದೆ ಎಂದರು. ಬಳಿಕ ನಡೆದ ವಿವಿಧ ಗೋಷ್ಠಿಗಳಲ್ಲಿ ಸಾಹಿತಿಗಳು, ವಿಚಾರವಾದಿಗಳು ತಮ್ಮ ವಿಚಾರ ಮಂಡಿಸಿದರು.
ಇಂಗ್ಲಿಷ್ ಮರೆತು ಹೋಗಿದೆ:
ನಾನು ಸಾಹಿತಿಯಲ್ಲ, ಕನ್ನಡ ಎಂಎ ಮಾಡಿಲ್ಲ. ಆದರೂ ನನ್ನಲ್ಲಿನ ಕನ್ನಡ ಪ್ರೀತಿ ನೋಡಿ ರಾಮಕೃಷ್ಣ ಹೆಗಡೆ ನನ್ನನ್ನು 1983ರಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. 1 ವರ್ಷ ಅಧ್ಯಕ್ಷನಾಗಿ ಕೆಲಸ ಮಾಡಿದೆ. ಆ ಬಳಿಕ ಹೆಚ್ಚೆಚ್ಚು ಕನ್ನಡ ಬಳಕೆ ಶುರು ಮಾಡಿದೆ. ಕನ್ನಡದಲ್ಲೇ ಸಹಿ ಮಾಡಲು ಆರಂಭಿಸಿದೆ. ಇಂಗ್ಲಿಷ್ ಮರೆತೇ ಹೋಯಿತು. ಸಿಎಂ ಆದ ಬಳಿಕ ಇಂಗ್ಲಿಷ್ ಕಡತಗಳಿಗೆ ಇಂಗ್ಲಿಷ್‍ನಲ್ಲೇ ಸಹಿ ಮಾಡುತ್ತೇನೆ. ಆದರೆ, ಯಾರೋ ಒಬ್ಬ ಇದು ಸಿದ್ದರಾಮಯ್ಯ ಅವರ ಸಹಿಯಲ್ಲ ಎಂದು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಇದಕ್ಕೆ ಸ್ಪಷ್ಟನೆ ಕೇಳಿ ರಾಜ್ಯಪಾಲರು ನನಗೆ ನೋಟಿಸ್ ಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಕನಕದಾಸ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ಮುಕ್ತ ವಿವಿ ಕುಲಪತಿ ಪೆÇ್ರ.ಶರಣಪ್ಪ ವಿ.ಹಲಸೆ, ಸಂಸ್ಕೃತಿ ಇಲಾಖೆ ನಿರ್ದೇಶಕ ಧರಣೀದೇವಿ ಮಾಲಗತ್ತಿ, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.