ಧಾರ್ಮಿಕ ತಾಣಗಳ ಮಂಜೂರು ಅನುದಾನಕ್ಕೂ ಖೊಕ್..!;  ಸರ್ಕಾರದ ‘ಮೀನಾಮೇಷ’-ನ್ಯಾಯಾಲಯದ ಮೊರೆಗೆ ನಿರ್ಧಾರ
ಪುತ್ತೂರು; ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುಮಾರು ೨೭ ಧಾರ್ಮಿಕ ತಾಣಗಳ ಅಭಿವೃದ್ಧಿಗಾಗಿ ಮಂಜೂರುಗೊಂಡ ಸುಮಾರು ೧ ಕೋಟಿಗೂ ಅಧಿಕ ಹಣ ಮುಜರಾಯಿ ಇಲಾಖೆಯಲ್ಲಿಯೇ ಬಾಕಿಯಾಗಿದ್ದು, ಧಾರ್ಮಿಕ ತಾಣಗಳ ಆಡಳಿತ ಮಂಡಳಿಗಳು ಪೂರ್ಣ ಕಾಮಗಾರಿ ನಡೆಸಲಾದ ಬಿಲ್‌ನ್ನು ಇಲಾಖೆಗೆ ಹಸ್ತಾಂತರ ಮಾಡಿದ್ದರೂ ದ್ವಿತೀಯ ಹಂತದ ಮಂಜೂರಾದ ಹಣ ನೀಡಲು ಸರ್ಕಾರ ‘ಮೀನಾಮೇಷ’ ಎನಿಸುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.  ಈ ಹಿನ್ನಲೆಯಲ್ಲಿ ಇದೀಗ ದೇವಳದ ಆಡಳಿತ ಸಮಿತಿಗಳು ನ್ಯಾಯಾಲಯದ ‘ಮೆಟ್ಟಲು’ ಹತ್ತಲು ಮುಂದಾಗಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಹಿಂದೂ ಧಾರ್ಮಿಕ ತಾಣಗಳ ಅಭಿವೃದ್ಧಿಗೆ ಈ ಹಿಂದಿನ ಸರ್ಕಾರ ಅನುದಾನ ಘೋಷಣೆ ಮಾಡಿತ್ತು. ಧಾರ್ಮಿಕ ತಾಣಗಳ ಅಭಿವೃದ್ಧಿಯ ಮೊದಲ ಹಂತದ ಕಾಮಗಾರಿ ಬಳಿಕ ಅನುದಾನದ ಅರ್ಧಭಾಗ ನೀಡಲಾಗಿತ್ತು. ಕಾಮಗಾರಿ ಪೂರ್ಣಗೊಳಿಸಿ ಇದೀಗ ೨ ವರ್ಷ ಕಳೆದರೂ ಇನ್ನೂ ಉಳಿಕೆ ಹಣವನ್ನು ನೀಡಲು ಸರ್ಕಾರ ಮುಂದಾಗುತ್ತಿಲ್ಲ.
ದೈವ-ದೇವಳಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಬರಬೇಕಾಗಿದ್ದ ಹಣವನ್ನು ನಂಬಿ ಈ ಧಾರ್ಮಿಕ ತಾಣಗಳ ಆಡಳಿತ ಮಂಡಳಿಗಳು ಸಾಲ ಮಾಡಿ ಅಭಿವೃದ್ಧಿ ಕೆಲಸವನ್ನು ಪೂರ್ಣಗೊಳಿಸಿದ್ದರು. ಬ್ರಹ್ಮಕಲಶೋತ್ಸವವೂ ನಡೆದಿದೆ. ಆದರೆ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಘೋಷಣೆ ಮಾಡಿದ ಈ ಅನುದಾನದ ಮೊದಲ ಕಂತು ಸಿಕ್ಕಿದರೂ ೨ನೇ ಕಂತು ಬರದೆ ಆಡಳಿತ ಮಂಡಳಿಗಳು ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿವೆ.
ಹಣ ಬರಬೇಕಾದ ಧಾರ್ಮಿಕ ತಾಣಗಳು..
ಸರ್ವೆ ಗ್ರಾಮದ ಎಲಿಯ ವಿಷ್ಣುಮೂರ್ತಿ ದೇವಳ ( ೨೦ಲಕ್ಷ), ವಿಟ್ಲ ಅಯ್ಯಪ್ಪಸ್ವಾಮಿ ದೇವಸ್ಥಾನ (ರೂ.೫ಲಕ್ಷ), ಬಡಗನ್ನೂರು ಅಯ್ಯಪ್ಪ ಭಜನಾ ಸೇವಾಸಂಘ (ರೂ.೫ ಲಕ್ಷ), ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ (ರೂ.೧೫ ಲಕ್ಷ), ಕೃಷ್ಣ ಭಜನಾ ಮಂದಿರ ಅರಿಯಡ್ಕ (ರೂ.೧೦ಲಕ್ಷ), ವಿಷ್ಣುಮೂರ್ತಿ ದೇವಸ್ಥಾನ ದೇಂತಡ್ಕ ಬಿಳಿಯೂರು (ರೂ.೧೦ಲಕ್ಷ), ಮಹಾಲಿಂಗೇಶ್ವರ ದೇವಸ್ಥಾನ ಬೆಟ್ಟಂಪಾಡಿ (ರೂ.೧೦ ಲಕ್ಷ), ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನ ಪಜಿಮಣ್ಣು ಮುಂಡೂರು (ರೂ.೧೦ಲಕ್ಷ), ಉಳ್ಳಾಕ್ಲು ಧೂಮಾವತಿ ಮಲರಾಯ ದೇವಸ್ಥಾನ ಕೆದಿಲ(ರೂ.೫ಲಕ್ಷ), ಮಾಣಿಲಬೀಡು ವಿಷ್ಣುಮೂರ್ತಿ ದೇವಸ್ಥಾನ ಮಾಣಿಲ (ರೂ.೫ಲಕ್ಷ), ಇರಂದೂರು ಪಡೀಲು ಲಕ್ಷ್ಮೀನರಸಿಂಹ ದೇವಸ್ಥಾನ ವಿಟ್ಲ (ರೂ.೫ಲಕ್ಷ),  ಕೆದಂಬಾಡಿ ಸನ್ಯಾಸಿಗುಡ್ಡೆ ರಾಮಭಜನಾ ಮಂದಿರ (ರೂ.೫ಲಕ್ಷ), ವಿಷ್ಣುಮೂರ್ತಿ ದೇವಸ್ಥಾನ ಮಣಿಕ್ಕರ ಪಾಲ್ತಾಡು(ರೂ.೫ಲಕ್ಷ), ಮೃತ್ಯುಂಜಯೇಶ್ವರ ದೇವಸ್ಥಾನ ನರಿಮೊಗರು (ರೂ.೧೦ಲಕ್ಷ), ಕುಂಡ್ಲ ಸಿದ್ಧಿವಿನಾಯಕ ದೇವಸ್ಥಾನ ಗಾಣದಮೂಲೆ ಬಜತ್ತೂರು(ರೂ.೧೦ಲಕ್ಷ), ಗೋಪಾಲಕೃಷ್ಣ ದೇವಸ್ಥಾನ ಪೆರುವಾಯಿ (ರೂ.೫ಲಕ್ಷ), ವಿಷ್ಣುಮೂರ್ತಿ ದೇವಸ್ಥಾನ ವೀರಮಂಗಲ(ರೂ.೫ಲಕ್ಷ), ಕಾಳಿಕಾಂಬ ದೇವಸ್ಥಾನ ಕುಕ್ಕಾಜೆ ಮಾಣಿಲ(ರೂ.೫ಲಕ್ಷ), ವಿಷ್ಣುಮಂಗಲ ದೇವಸ್ಥಾನ ಅಳಿಕೆ(ರೂ.೧೦ಲಕ್ಷ), ದುರ್ಗಾಪರಮೇಶ್ವರಿ ಮಲರಾಯ ದೇವಸ್ಥಾನ ಬೊಳುವಾರುಬೈಲು(ರೂ.೫ಲಕ್ಷ) ಉಳ್ಳಾಲ ಮಹಾವಿಷ್ಣುಮೂರ್ತಿ ದೇವಸ್ಥಾನ ಕುರಿಯ(ರೂ.೫ಲಕ್ಷ), ಮಹಮ್ಮಾಯಿ ಮಾರಿಯಮ್ಮ ಸೇವಾಟ್ರಸ್ಟ್ ಕರ್ಮಲ(ರೂ.೫ಲಕ್ಷ), ಉಳ್ಳಾಲ್ತಿ ಭಜನಾಮಂದಿರ ಅಮೈ ಕೇಪು(ರೂ.೫ಲಕ್ಷ), ಕಿನ್ನಿಮಾಣಿ ಪೂಮಾಣಿ ದೈವಸ್ಥಾನ ಪಾಣಾಜೆ(ರೂ.೫ಲಕ್ಷ), ರಕ್ತೇಶ್ವರಿ ದೇವಸ್ಥಾನ ನೆಹರೂನಗರ(ರೂ.೫ಲಕ್ಷ), ಸುಬ್ರಹ್ಮಣ್ಯ ದೇವಸ್ಥಾನ ಕಾರ್ಪಾಡಿ(ರೂ.೧೦ಲಕ್ಷ) ಹಾಗೂ ಆದಿಶಕ್ತಿ ದೇವಸ್ಥಾನ ಎಡಮಂಗಲ ಕಡಬ (ರೂ.೫ಲಕ್ಷ) ಈ ಧಾರ್ಮಿಕ ತಾಣಗಳಿಗೆ ಹಣ ಬಾಕಿಯಾಗಿದೆ ಎಂದು ತಿಳಿದುಬಂದಿದೆ.
ನ್ಯಾಯಾಲಯಕ್ಕೆ ಮೊರೆ
ಈಗಾಗಲೇ ಕೆಲ ಧಾರ್ಮಿಕ ತಾಣಗಳ ಆಡಳಿತ ಮಂಡಳಿಗಳು ಮುಜರಾಯಿಇಲಾಖೆಯಿಂದ ಬರಬೇಕಾದ ಹಣಕ್ಕಾಗಿ ನ್ಯಾಯಾಲಯದ ಮೊರೆ ಹೋಗಿವೆ. ಉಳಿದ ಧಾರ್ಮಿಕ ತಾಣಗಳೂ ನ್ಯಾಯಾಲಯದ ಮೆಟ್ಟಲು ಹತ್ತಲು ತೀರ್ಮಾನ ನಡೆಸಿವೆ. ಮಂಜೂರುಗೊಂಡರೂ ಹಣವನ್ನು ಇಲಾಖೆ ನೀಡದಿರುವುದು ಈ ಧಾರ್ಮಿಕ ತಾಣಗಳ ಆಡಳಿತಮಂಡಳಿಗಳ ಆಕ್ರೋಶಕ್ಕೆ ಕಾರಣವಾಗಿದೆ.
—ಕೋಟ್–
ಆಡಳಿತ ಮಂಡಳಿಗಳಿಗೆ ಸಂಕಷ್ಟ
ಸಿದ್ಧರಾಮಯ್ಯ ಅವರ ನೇತೃತ್ವದ ರಾಜ್ಯಸರ್ಕಾರ ಹಿಂದುಗಳು ಮತ್ತು ಹಿಂದೂ ಧಾರ್ಮಿಕ ತಾಣಗಳನ್ನು ಕಡೆಗಣಿಸುವ ಕೆಲಸ ಮಾಡುತ್ತಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ದೈವದ ಗುಡಿಗಳು ಹಾಗೂ ದೇವಳಗಳಿಗೆ ಅನುದಾನ ನೀಡುವ ಕೆಲಸ ಈ ಹಿಂದಿನ ಸರ್ಕಾರ ಮಾಡಿತ್ತು. ಮೊದಲ ಕಂತನ್ನು ನೀಡಿತ್ತು.  ಮುಂದಿನ ಹಂತದಲ್ಲಿ ಅನುದಾನದ ೨ನೇ ಕಂತನ್ನು ಈ ಸರ್ಕಾರ ನೀಡಬೇಕಾಗಿತ್ತು. ದೇವಳಗಳು ಜೀರ್ಣೋದ್ಧಾರವಾಗಿ, ಬ್ರಹ್ಮಕಲಶವಾಗಿ ಅನುದಾನ ಸದ್ಭಳಕೆ ಮಾಡಿ ಸಾರ್ವಜನಿಕರ ದೇಣಿಗೆ ಬಳಿಸಿಕೊಂಡು ಕೆಲಸ ಮಾಡಲಾಗಿತ್ತು. ಮುಜರಾಯಿ ಇಲಾಖೆ ಈ ದೇವಳಗಳಿಗೆ ಹಣ ನೀಡದ ಕಾರಣ ಎಷ್ಟೋ ಕಡೆಗಳಲ್ಲಿ ಬ್ರಹ್ಮಕಲಶೋತ್ಸವಕ್ಕೆ ಚಪ್ಪರ ಹಾಕಿದ ಮಂದಿಗೂ ಹಣ ನೀಡಲಾಗದೆ ಆಡಳಿತ ಮಂಡಳಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ
\ಸಂಜೀವ ಮಠಂದೂರು ಮಾಜಿ ಶಾಸಕರು ಪುತ್ತೂರು.

ಮೇಘಾ ಪಾಲೆತ್ತಾಡಿ