ಪವರ್‌ಮ್ಯಾನ್ ಆಯ್ಕೆಯಲ್ಲಿ ಸ್ಥಳೀಯರಿಗೆ ಆಧ್ಯತೆ; ಇಂಧನ ಸಚಿವರನ್ನು ಆಗ್ರಹಿಸಿದ ಶಾಸಕ ಅಶೋಕ್ ರೈ
ಪುತ್ತೂರು: ಮೆಸ್ಕಾಂ ಇಲಾಖೆಯಲ್ಲಿ ಖಾಲಿ ಇರುವ ಪವರ್‌ಮ್ಯಾನ್ (ಲೈನ್‌ಮ್ಯಾನ್) ಹುದ್ದೆಯನ್ನು ಭರ್ತಿಗೊಳಿಸಲು ಸರ್ಕಾರ ಏಕಕಾಲದಲ್ಲಿ ಸಂದರ್ಶನ ನಡೆಸಬೇಕು ಮತ್ತು ಸ್ಥಳೀಯರಿಗೆ ಆಧ್ಯತೆಯನ್ನು ನೀಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಇಂಧನ ಸಚಿವ ಕೆ ಜೆ ಜಾರ್ಜ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು ಪವರ್‌ಮ್ಯಾನ್ ನೇಮಕಾತಿ ವಿಚಾರದಲ್ಲಿ ಸಚಿವರ ಜೊತೆ ಸುದೀರ್ಘ ಚರ್ಚೆ ನಡೆಸಿದರು.
ಪುತ್ತೂರಿನಲ್ಲಿ ಪವರ್‌ಮ್ಯಾನ್‌ಗಳ ಕೊರತೆ ಇದೆ. ಮಳೆಗಾಲದಲ್ಲಿ ಇದು ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಪವರ್‌ಮ್ಯಾನ್‌ಗಳ ಕೊರತೆಯಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಹಲವು ವರ್ಷಗಳಿಂದ ಪವರ್ ಮ್ಯಾನ್ ಹುದ್ದೆಯನ್ನು ಭರ್ತಿ ಮಾಡದೇ ಇರುವುರದಿಂದ ಸರಕಾರ ತಕ್ಷಣ ಪವರ್‌ಮ್ಯಾನ್‌ಗಳ ನೇಮಕಾತಿಯನ್ನು ಮಾಡಬೇಕು ಎಂದು ಆಗ್ರಹಿಸಿದರು.
ಪುತ್ತೂರಿನಲ್ಲಿ ಕಂಬ ಹತ್ತುವ ತರಬೇತಿ
ಮೆಸ್ಕಾಂ ಪವರ್‌ಮ್ಯಾನ್ ಗಳ ಆಯ್ಕೆಗಾಗಿ ವಿದ್ಯುತ್ ಕಂಬ ಹತ್ತುವ ತರಬೇತಿಯನ್ನು ಪುತ್ತೂರು ಶಾಸಕರು ತಮ್ಮ ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ಆಯೋಜನೆ ಮಾಡಿದ್ದು ಈಗಾಗಲೇ ಸುಮಾರು ೪೦೦ ಮಿಕ್ಕಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ತರಬೇತಿ ನಡೆಯಲಿದೆ. ತರಬೇತಿಯಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಲು ಅರ್ಹತೆಯನ್ನು ಪಡೆಯಲಿದ್ದಾರೆ. ಮುಂದಿನ ವಾರ ಕಂಬ ಹತ್ತುವ ತರಬೇತಿ ನಡೆಯಲಿದೆ.
–ಕೋಟ್–
ಮೆಸ್ಕಾಂ ಪವರ್‌ಮೆನ್ ಹುದ್ದೆ ಖಾಲಿ ಇದೆ. ಇದರ ನೇಮಕಾತಿ ವೇಳೆ ಸ್ಥಳೀಯರಿಗೆ ಆಧ್ಯತೆಯನ್ನು ನೀಡಬೇಕು. ಏಕಕಾಲದಲ್ಲಿ ರಾಜ್ಯಾದ್ಯಂತ ಸಂದರ್ಶನ ನಡೆಸಿದರೆ ಸ್ಥಳೀಯರಿಗೆ ಅವಕಾಶಗಳು ದೊರೆಯುತ್ತದೆ ಈ ನಿಟ್ಟಿನಲ್ಲಿ ಇಂಧನ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ. ನಮ್ಮ ಜಿಲ್ಲೆಯಲ್ಲಿ ನೂರಾರು ಮಂದಿ ಯುವಕರಿದ್ದು ಅವರಿಗೂ ಉದ್ಯೋಗ ದೊರೆಯುವಂತಾಗಲಿ ಎಂಬುದು ನನ್ನ ಉದ್ದೇಶ-ಅಶೋಕ್ ರೈ, ಶಾಸಕರು ಪುತ್ತೂರು