ವ್ಯಕ್ತಿಯ ಜೀವನದ ಪಥವನ್ನು ಬದಲಿಸುವ ಶಕ್ತಿ ಪುಸ್ತಕಗಳಿಗಿದೆ
ಕಲಬುರಗಿ:ಏ.23: ಒಬ್ಬ ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಪುಸ್ತಕಗಳಿಗಿವೆ. ಇವುಗಳು ಸಾಧನೆಯ ದಾರಿಯನ್ನು ತಿಳಿಸುವ ಮೂಲಕ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣ ಮಾಡುವ ಸಾಧನಗಳಾಗಿವೆ. ಆದ್ದರಿಂದ ಅನೇಕ ಚಟಗಳನ್ನು ರೂಢಿಸಿಕೊಂಡು ಹಾಳಾಗುವ ಬದಲು, ಉತ್ತಮವಾದ ಪುಸ್ತಕಗಳನ್ನು ನಿರಂತರವಾಗಿ ಓದುವ ಹವ್ಯಾಸವನ್ನು ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ‘ಶ್ರೀ ವಿವೇಕಾನಂದ ಕೋಚಿಂಗ್ ಸೆಂಟರ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ‘ವಿಶ್ವ ಪುಸ್ತಕ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಜ್ಞಾನಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ. ಇದು ಯಾರಿಂದಲೂ ಕಳ್ಳತನ ಮಾಡಲಾಗದ ಸಂಪತ್ತಾಗಿದೆ. ಇಂತಹ ಅಮೂಲ್ಯವಾದ ಸಂಪತ್ತನ್ನು ಪ್ರತಿಯೊಬ್ಬರು ಪಡೆಯಬೇಕಾದರೆ ಸದಾ ಪುಸ್ತಕಗಳನ್ನು ಓದಬೇಕು. ವಿದ್ಯಾರ್ಥಿ ದೆಸೆಯಿಂದಲೇ ಶ್ರೇಷ್ಠ ಪುಸ್ತಕಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು. ನಾವು ಹೆಚ್ಚು ಓದಿದಷ್ಟು ಅರಿವು ಮತ್ತು ಜ್ಞಾನದ ವ್ಯಾಪ್ತಿ ಹೆಚ್ಚಾಗಿ ವ್ಯಕ್ತಿ, ಶಕ್ತಿಯಾಗುತ್ತಾನೆ. ವಿಶೇಷವಾಗಿ ಯುವಕರು ಉತ್ತಮ ಗ್ರಂಥಗಳ ಅಧ್ಯಯನದತ್ತ ಚಿತ್ತಹರಿಸಬೇಕಾಗಿದೆ ಎಂದು ಒತ್ತಿ ಹೇಳಿದರು.
ಶ್ರೀ ವಿವೇಕಾನಂದ ಕೋಚಿಂಗ ಸೆಂಟರ್‍ನ ಮುಖ್ಯಸ್ಥ ಬಸವರಾಜ ಮಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳಿಕೆ ಅಥವಾ ಪ್ರಮಾಣ ಪತ್ರಕ್ಕಾಗಿ ಅಧ್ಯಯನ ಮಾಡಿದರೆ ಸಾಲದು. ಬದಲಿಗೆ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣವಾಗಲು ಮಹನೀಯರ ಜೀವನ ಚರಿತ್ರೆ ಅಧ್ಯಯನ ಮಾಡಬೇಕಾದದ್ದು ಅವಶ್ಯಕವಾಗಿದೆ. ಪುಸ್ತಕ ಓದುವದರಿಂದ ಶ್ರೇಷ್ಠ ಸಂಸ್ಕøತಿ, ಕಲೆ, ಸಾಹಿತ್ಯ, ಮಾನವೀಯ ಮೌಲ್ಯಗಳು ತಿಳಿಯುತ್ತವೆ. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪುಸ್ತಕಗಳು ಪ್ರೇರಣೆಯನ್ನು ನೀಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸುಜಾತಾ, ಭಾಗ್ಯಶ್ರೀ ಕಲ್ಲೂರ್, ವಿಜಯಲಕ್ಷ್ಮೀ ನಾಲವಾರ, ಪ್ರತಿಭಾವಂತ ವಿದ್ಯರ್ಥಿಗಳಾದ ರಿಶಿಕೇಶ್, ಖುಶಿ ಸೇರಿದಂತೆ ಇನ್ನಿತರರಿದ್ದರು.