ಕೈ ನಾಯಕರಿಂದ ಅಭಿವೃದ್ಧಿ ಯೋಜನೆಗಳ ಪ್ರಣಾಳಿಕೆ ಬಿಡುಗಡೆ
ಸಂಜೆವಾಣಿ ನ್ಯೂಸ್
ಮೈಸೂರು: ಏ.23:- ಮೈಸೂರುಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಸಿದ್ಧಪಡಿಸಿರುವ ಹಲವು ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಭರವಸೆಯುಳ್ಳ ಪ್ರಣಾಳಿಕೆಯನ್ನು ಕಾಂಗ್ರೆಸ್ ಭವನದಲ್ಲಿ ಪಕ್ಷದ ನಾಯಕರು ಸೋಮವಾರ ಬಿಡುಗಡೆ ಮಾಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಮಾತನಾಡಿ, 10 ವರ್ಷಗಳಿಂದ ಮೈಸೂರು- ಕೊಡಗಿಗೆ ಅಪಾರ ನಷ್ಟವಾಗಿದೆ. ಹಿಂದಿನ ಸಂಸದರು, ಚುನಾವಣೆಗೆ ಮುನ್ನ ನೀಡಿದ್ದ ಯಾವುದೇ ಆಶ್ವಾಸನೆಗಳ ಬಗ್ಗೆ ಮಾತನಾಡಲೇ ಇಲ್ಲ. ಅನುಷ್ಠಾನಗೊಳಿಸಲೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಹಿಂದಿನ ಸಂಸದರಿಗೆ ನಾವು ಸಲಹೆಗಳನ್ನು ಕೊಟ್ಟಿದ್ದೆವು. ಆದರೆ, ಸ್ಪಂದಿಸಲಿಲ್ಲ. ಬಹಿರಂಗ ಚರ್ಚೆಗೆ ಆಹ್ವಾನವನ್ನೂ ನೀಡಿದ್ದೆವು. ಆಗಲೂ ಬರಲಿಲ್ಲ. ನಮ ಅಭ್ಯರ್ಥಿ ಜನರೊಂದಿಗೆ ನಿಲ್ಲುವ ಕನಸನ್ನು ಮುಂದಿಟ್ಟಿದ್ದಾರೆ. ಅವರ ಕಾಳಜಿಬದ್ಧತೆಯನ್ನು ಜನರು ಬೆಂಬಲಿಸಬೇಕು ಎಂದು ಕೋರಿದರು.
ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಲಕ್ಷ್ಮಣ ಹಲವು ದಶಕಗಳಿಂದ ಬಹಳಷ್ಟು ಜನಪರ ಹೋರಾಟಗಳಲ್ಲಿ ಪಾಲ್ಗೊಂಡವರು. ಜನರೊಂದಿಗೆ ಒಡನಾಟದಲ್ಲೇ ಇರುವುದರಿಂದ ದೂರದೃಷ್ಟಿಯನ್ನು ಹೊಂದಿದ್ದಾರೆ ಎಂದರು.
ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡ, ಅಭ್ಯರ್ಥಿ ಹೇಗೆ ಜನಪರವಾಗಿ ಇದ್ದಾರೆ ಎಂಬುದಕ್ಕೆ ಲಕ್ಷ್ಮಣ ಅವರು ಹೊರತಂದಿರುವ ಪ್ರಣಾಳಿಕೆಯೇ ಸಾಕ್ಷಿ. ಅವರನ್ನು ಮತದಾರರು ಬೆಂಬಲಿಸಿದರೆ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುವುದರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಪಕ್ಷದ ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್‍ಕುಮಾರ್, ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮುಖಂಡರಾದ ಪುರುಷೋತ್ತಮ, ಎಚ್. ವಿ. ರಾಜೀವ್, ಎಂ.ಪ್ರದೀಪ್ ಕುಮಾರ್, ಬಿ.ಎಂ. ರಾಮು ಪಾಲ್ಗೊಂಡಿದ್ದರು.