ಒಂದೇ ಪಕ್ಷಕ್ಕೆ ಸಮುದಾಯವನ್ನು ಆಡವಿಡುವ ಕೆಲಸ ಬೇಡ: ಪು.ಶ್ರೀನಿವಾಸ ನಾಯಕ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.23- ಒಂದೇ ಪಕ್ಷಕ್ಕೆ ನಾಯಕ ಸಮುದಾಯವನ್ನು ಅಡವಿಡುವ ಕೆಲಸ ಮಾಡಬಾರದು ಎಂದು ಕಾಂಗ್ರೆಸ್ ಪರಿಶಿಷ್ಟ ಪಂಗಡಗಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪು. ಶ್ರೀನಿವಾಸ ನಾಯಕ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಬಿಜೆಪಿ ಮುಖಂಡರು ಇತ್ತಿಚೆಗೆ ಸಂಪೂರ್ಣವಾಗಿ ನಾಯಕ ಸಮಾಜದ ಬಿಜೆಪಿಯನ್ನು ಬೆಂಬಲಿಸಲಿದೆ ಎಂಬರ್ಥದಲ್ಲಿ ಹೇಳಿಕೆ ನೀಡುವುದು ಸರಿಯಲ್ಲ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಹಾಗೂ ಇತರೇ ಪಕ್ಷಗಳಲ್ಲಿ ನಾಯಕ ಸಮಾಜದ ಮುಖಂಡರು ಇದ್ದು, ರಾಜಕಾರಣ ಮಾಡುತ್ತಾರೆ. ಇದನ್ನು ಅರಿತು ಮಾತನಾಡುವುದು ಒಳಿತು. ವೈಯಕ್ತಿಕ ಹೇಳಿಕೆಯನ್ನು ಸಮಾಜಕ್ಕೆ ಸೇರ್ಪಡೆ ಮಾಡುವುದು ಸರಿಯಲ್ಲ ಎಂದರು.
ತಳವಾರ ಮತ್ತು ಪರಿವಾರ ಪದವನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಲು 30 ವರ್ಷಗಳ ಹೋರಾಟ ಕಾರಣವಾಗಿದೆ. ಶ್ರೀ ವಾಲ್ಮೀಕಿ ಪ್ರಸನ್ನ ನಂದಸ್ವಾಮೀಜಿಗಳ ನಿರಂತರ ಹೋರಾಟ ಫಲವಾಗಿ ಸಾಧ್ಯವಾಗಿದೆ ಹೊರತು ರಾಜಕೀಯ ಪಕ್ಷಗಳಿಂದ ಅಲ್ಲ. ಸಿದ್ದರಾಮಯ್ಯ ಅವರ 2013ರಲ್ಲಿ ಮುಖ್ಯಮಂತ್ರಿಗಳಾಗಿದ್ದ, ಎಸ್ಟಿ ಸೇರ್ಪಡೆ ಸಂಬಂಧ ಕುಲಶಾಸ್ತ್ರಿ ಅಧ್ಯಯನ ಮಾಡಿಸುವ ಮೂಲಕ ಎಸ್ಟಿಗೆ ಸೇರ್ಪಡೆಯಾಗಲು ಕಾರಣರಾಗಿದ್ದಾರೆ ಎಂದರು. ಅಲ್ಲದೇ ಗುತ್ತಿಗೆಯಲ್ಲಿ ಎಸ್ಸಿ ಎಸ್ಟಿಗಳಿಗೆ ಮೀಸಲಾತಿ ಕಲ್ಪಿಸಿದ್ದು ಕಾಂಗ್ರೆಸ್ ಸರ್ಕಾರವಾಗಿದೆ. ಇದು ನಾಯಕ ಸಮುದಾಯಕ್ಕೆ ಕಾಂಗ್ರೆಸ್ ಕೊಡುಗೆ ಅಲ್ಲವೇ ತಿರುಗೇಟು ನೀಡಿದರು.
ಚಾ.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಹೆಚ್ಚಿನ ಬಹುಮತದಲ್ಲಿ ಗೆಲುವು ಸಾಧಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉತ್ತಮ ಆಡಳಿತ ಮತ್ತು ರಾಜ್ಯ ಜನರಿಗೆ ನೀಡಿರುವ ಐದು ಗ್ಯಾರಂಟಿಗಳು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪೂರಕವಾಗಿದೆ ಎಂದು ಪು. ಶ್ರೀನಿವಾಸನಾಯಕ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರಕಲವಾಡಿ ಸೋಮನಾಯಕ, ಎಪಿಎಂಸಿ ಉಪಾಧ್ಯಕ್ಷ ರಾಮಚಂದ್ರ, ರಮೇಶ್, ಮುಖಂಡರಾದ ಪಾಳ್ಯ ಕೃಷ್ಣ, ಹಂಗಳ ವೃಷಬೇಂದ್ರ ಇತರರು ಇದ್ದರು.