ನೇಹಾ ಹಿರೇಮಠ ಹತ್ಯೆ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.23- ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹ ಹಿರೇಮಠ ಹತ್ಯೆ ಹಾಗೂ ಹಿಂದೂ ಯುವಕ ಮೇಲಿನ ಹಲ್ಲೆ ಖಂಡಿಸಿ ಬಿಜೆಪಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್‍ಕುಮಾರ್ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದರು. ಕೆಲ ಕಾಲ ರಸ್ತೆ ತಡೆ ನಡೆಸಿ, ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎನ್. ಮಹೇಶ್, ರಾಜ್ಯದಲ್ಲಿ ಹಿಂದುಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿರುವ ಅಲ್ಪಸಂಖ್ಯಾತ ಕೋಮಿನ ಅಪರಾಧಿಗಳನ್ನು ಶಿಕ್ಷಿಸಿ ನ್ಯಾಯ ದೊರಕಿಸಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ರಾಜ್ಯ ಸರ್ಕಾರವು ಒಂದು ಅಲ್ಪಸಂಖ್ಯಾತ ಕೋಮಿನ ಪಕ್ಷವೆಂಬಂತೆ ವರ್ತಿಸುತ್ತಾ ಬಹುಸಂಖ್ಯಾತ ಹಿಂದುಗಳ ಮೇಲೆ ಇಷ್ಟು ದೌರ್ಜನ್ಯ ನಡೆಯುತ್ತಿದ್ದರೂ ಸುಮ್ಮನಿರುವುದು ಸಂವಿಧಾನ ವಿರುದ್ಧವಾಗಿದೆ ಎಂದು ದೂರಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್. ನಿರಂಜನ್‍ಕುಮಾರ್ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ನಿಷ್ಕೀಯವಾಗಿದ್ದು, ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕಾಲೇಜಿಗೆ ಹೋದ ವಿದ್ಯಾರ್ಥಿನಿಯ ಹತ್ಯೆಯಾಗಿದೆ ಎಂದರೆ ನಾಗರೀಕ ಸಮಾಜ ತಲೆತಗ್ಗಿಸುವಂತಿದೆ. ಅಲ್ಲದೇ, ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು, ಗೃಹ ಸಚಿವರು ಅರೋಪಿಯನ್ನು ರಕ್ಷಿಸುವ ರೀತಿಯಲ್ಲಿ ಮಾತನಾಡಿರುವುದು ಅಕ್ಷ್ಯಮ ಅಪರಾಧವಾಗಿದೆ. ಈ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ತನಿಖೆ ನಡೆಯುವುದು ಅನುಮಾನವಾಗಿದೆ. ಇದೊಂದ ಲವ್ ಜಿಹಾದ್ ಆಗಿದ್ದು, ಮುಗ್ದ ಯುವತಿಯನ್ನು ನಂಬಿಸಿ, ಮೋಸ ಮಾಡುವ ಜಾಲ ಇದಾಗಿದೆ. ಇದನ್ನು ಭೇದಿಸಲು ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು. ಎಲ್ಲ ಘಟನೆಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಠಿಣವಾಗಿ ಶಿಕ್ಷಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಮೂಲಕ ಹಿಂದುಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪ್ರಭಾರಿ ಎನ್.ವಿ. ಫಣೀಶ್, ಮುಖಂಡರಾದ ನೂರೊಂದುಶೆಟ್ಟಿ, ಚಂದ್ರಶೇಖರ್, ನಾಗಶ್ರೀ ಪ್ರತಾಪ್, ಮಲೆಯೂರು ಕಮಲಮ್ಮ, ಸರಸ್ವತಿ, ವಿಶಾಲಾಕ್ಷಿ, ಮಹದೇವಸ್ವಾಮಿ, ಕಿಲಗೆರೆ ಬಸವರಾಜು, ಆನಂದ್ ಭಗೀರಥ, ರಾಜೇಶ್ವರಿ ಇತರರು ಇದ್ದರು.